
ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರದ ಬಗ್ಗೆ ಒಂದಲ್ಲಾ ಒಂದು ಬಾರಿಯಾದ್ರು ಕೇಳಿರುತ್ತೀರಾ. ದಿ ತಾಷ್ಕೆಂಟ್ ಫೈಲ್ಸ್ ನಂತಹ ಅದ್ಭುತ ಚಿತ್ರ ನೀಡಿದ ವಿವೇಕ್ ರಂಜನ್ ಅಗ್ನಿಹೋತ್ರಿ, 1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ನಿಜವಾದ ಕಥೆಯನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ಈಗಾಗ್ಲೇ ಸಾಮಾಜಿಕ ವಲಯದಿಂದ ಟೀಸರ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೋಟ್ಯಾಂತರ ಮಂದಿ ಚಿತ್ರ ನೋಡಲು ಕಾತರರಾಗಿದ್ದಾರೆ.
ಚಿತ್ರತಂಡ ವಿವಿಧ ಪ್ಲಾಟ್ ಫಾರ್ಮ್ ಗಳಲ್ಲಿ ಚಿತ್ರದ ಪ್ರಮೋಷನ್ ಮಾಡುತ್ತಿದೆ. ಹೀಗಿರುವಾಗ ಕಾಶ್ಮೀರ್ ಫೈಲ್ಸ್ ಚಿತ್ರತಂಡವನ್ನು ಕಪಿಲ್ ಶರ್ಮಾ ಶೋನಲ್ಲಿ ನೋಡಬೇಕು ಎಂದು ವಿವೇಕ್ ಅವರನ್ನು ಟ್ಯಾಗ್ ಮಾಡಿ ಅಭಿಮಾನಿಯೊಬ್ಬರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ವಿವೇಕ್, ಬಿಗ್ ಸ್ಟಾರ್ ಇಲ್ಲದ ಚಿತ್ರವನ್ನು ಕಪಿಲ್ ಪ್ರಮೋಟ್ ಮಾಡುವುದಿಲ್ಲ ಎಂದಿದ್ದಾರೆ.
ಇದರಿಂದ ವಿವಾದದ ಹೊಗೆ ಹೆಚ್ಚಾಗಿದೆ. ಟ್ವಿಟ್ಟರ್ ಬಳಕೆದಾರರು ಕಪಿಲ್ ಶರ್ಮಾ ಅವರ ಶೋ ಅನ್ನು ಬಾಯ್ಕಾಟ್ ಮಾಡಿ ಎಂದು ಟ್ವೀಟ್ ಮಾಡುತ್ತಿದ್ದು, ಈ ಬಾಯ್ಕಾಟ್ ಟ್ರೆಂಡ್ ಶುರುವಾಗಿದೆ. ಅಂದಹಾಗೇ ವಿವೇಕ್ ಈ ಬಗ್ಗೆ ಕೇಳಿದ ಮತ್ತೊಬ್ಬ ಅಭಿಮಾನಿಗೆ ಪ್ರತಿಕ್ರಿಯಿಸಿ, ನನಗೂ ಶೋ ನಲ್ಲಿ ಭಾಗವಹಿಸುವುದ ಇಷ್ಟವೇ ಆದರೆ ಬಾಲಿವುಡ್ ನಿಯಮ ಇದಕ್ಕೆ ಆಸ್ಪದ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತ ದಿ ಕಾಶ್ಮೀರ್ ಪೈಲ್ಸ್ ಚಿತ್ರ ಇದೇ ಮಾರ್ಚ್ 11ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಷಿ ಹಾಗೂ ದರ್ಶನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.