ಉಡುಪಿ: ಕಾಂತಾರಾ ಚಿತ್ರದಲ್ಲಿನ ಕಥೆಯನ್ನೇ ಹೋಲುವಂತಹ ಘಟನೆಯೊಂದು ಉಡುಪಿ ಜಿಲ್ಲೆಯ ಪಡುಬಿದ್ರೆ ತಾಲೂಕಿನ ಪಡುಹಿತ್ಲು ಬಳಿ ನಡೆದಿದೆ.
ದೈವಕೋಲ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ದೈವದ ತಂಬಿಲ ಸೇವೆ ಸಂದರ್ಭದಲ್ಲಿ ಸ್ಥಾನದ ಎದುರೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜಯಪೂಜಾರಿ ಮೃತ ವ್ಯಕ್ತಿ.
ಪಡುಹಿತ್ಲು ಗ್ರಾಮದಲ್ಲಿ ಜಾರಂದಾಯ ಬಂಟ ದೈವಸ್ಥಾನದಲ್ಲಿ ವರ್ಷಕ್ಕೊಮ್ಮೆ ವಿಜೃಂಭಣೆಯ ನೇಮೋತ್ಸವ ನಡೆಯುತ್ತದೆ. ಈ ದೇವಸ್ಥಾನ ನೋಡಿಕೊಳ್ಳಲು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿಯಿದೆ. ಪ್ರಕಾಶ್ ಶೆಟ್ಟಿ ಈ ಸಮಿತಿ ಅಧ್ಯಕ್ಷರಾಗಿದ್ದರು. ಸಮಿತಿ ಬದಲಾದ ಪರಿಣಾಮ ಪ್ರಕಾಶ್ ಶೆಟ್ಟಿ ಸಹಜವಾಗಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ. ಆದರೆ ಅಧಿಕಾರದ ಆಸೆಯಿಂದ ಪ್ರಕಾಶ್ ಶೆಟ್ಟಿ 9 ಜನರ ಪ್ರತ್ಯೇಕ ಟ್ರಸ್ಟ್ ರಚಿಸಿ ಇಲ್ಲಿಯ ಬಂಡಾರ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಾರೆ. ದೈವಸ್ಥಾನ ತಮಗೆ ಸೇರಿದ್ದು ಎಂದು ಹಕ್ಕು ಸ್ಥಾಪಿಸಲು ಯತ್ನಿಸಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿದೆ. ಜನವರಿ 7ರಂದು ಕೋಲ ನಡೆಸಲು ತೀರ್ಮಾನಿಸಿತ್ತು. ಇದರ ವಿರುದ್ಧ ಜಯಪೂಜಾರಿ ಹಾಗೂ ಪ್ರಕಾಶ್ ಶೆಟ್ಟಿ ಕೋರ್ಟ್ ಮೆಟ್ಟಿಲೇರಿ ಕೋಲಕ್ಕೆ ತಡೆಯಾಜ್ಞೆ ತಂದಿದ್ದಾರೆ. ಅಚ್ಚರಿ ಎಂದರೆ ಡಿಸೆಂಬರ್ 23ರಂದು ತಡೆಯಾಜ್ಞೆ ತಂದ ಜಯಪೂಜಾರಿ, ಡಿಸೆಂಬರ್ 24ರಂದು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ದೈವದ ತಂಬಿಲ ಸೇವೆ ಸಂದರ್ಭದಲ್ಲೇ ಮೃತಪಟ್ಟಿದ್ದು, ಊರ ಜನ ದಿಗ್ಭ್ರಾಂತರಾಗಿದ್ದಾರೆ.
ವಕೀಲ ಬಿ.ನಾಗೇಶ್ ಕೋರ್ಟ್ ನಲ್ಲಿ ವಾದ ಮಂಡಿಸಿ ತಡೆಯಾಜ್ಞೆ ತೆರವು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ದೈವಸ್ಥಾನದ ಸಮಿತಿ ಜಯಪೂಜಾರಿ ನಿಧನ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ನೇಮೋತ್ಸವವನ್ನು ಮುಂದೂಡಲಾಗಿದೆ. ಆದರೂ ಹಠ ಬಿಡದ ಪ್ರಕಾಶ್ ಶೆಟ್ಟಿ ಹಾಗೂ ಅವರ ಕಡೆಯ ಸಮಿತಿ ಸದಸ್ಯರು ಇಂದೇ ನೇಮೋತ್ಸವ ಮಾಡಲು ಹೊರಟಿದ್ದಾರೆ. ಪ್ರಕಾಶ್ ಶೆಟ್ಟಿ ನಿರ್ಧಾರಕ್ಕೆ ಊರ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವುದರಿಂದ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.