ಕಾನ್ಪುರ್: ಕಾನ್ಪುರದ ವ್ಯಕ್ತಿಯೊಬ್ಬ ಪತ್ನಿ ಒಲಿಸಿಕೊಳ್ಳಲು ರಜೆ ಕೋರಿದ ಪತ್ರ ವೈರಲ್ ಆಗಿದೆ. ಕಾನ್ಪುರದ ಸರ್ಕಾರಿ ನೌಕರರೊಬ್ಬರು ತಮ್ಮ ಪತ್ನಿಯೊಂದಿಗೆ ಮಾತನಾಡಿ ಮನೆಗೆ ಕರೆತರಲು ಎರಡು ದಿನಗಳ ರಜೆ ಕೋರಿ ಉನ್ನತ ಅಧಿಕಾರಿಗೆ ಪತ್ರ ಕಳುಹಿಸಿದ್ದಾರೆ. ನೌಕರ ಬರೆದಿರುವ ರಜೆ ಪತ್ರ ಇದೀಗ ವೈರಲ್ ಆಗಿದೆ.
ಶಂಸಾದ್ ಅಹ್ಮದ್ ಅವರು ಪ್ರೇಮ್ ನಗರದ ಬ್ಲಾಕ್ ಡೆವಲಪ್ ಮೆಂಟ್ ಅಧಿಕಾರಿ(ಬಿಡಿಒ)ಗೆ ಪತ್ರ ಬರೆದು ತನಗೆ ತುರ್ತು ರಜೆ ಏಕೆ ಬೇಕು ಎಂದು ವಿವರಿಸಿದ್ದಾರೆ.
ಅಹ್ಮದ್ ಪ್ರಕಾರ, ಅವರು ತನ್ನ ಹೆಂಡತಿಯೊಂದಿಗೆ ಜಗಳವಾಡಿದ ನಂತರ ಪತ್ನಿ ತಮ್ಮ ಮಕ್ಕಳನ್ನು ಕರೆದುಕೊಂಡು ತನ್ನ ತಾಯಿಯ ಮನೆಗೆ ಹೋಗಿದ್ದಳು. ಆಕೆಗೆ ತಿಳಿ ಹೇಳಿ ಕರೆತರಲು ಬಯಸಿರುವುದಾಗಿ ಅಹ್ಮದ್ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.
ನನಗೆ ನೋವಾಗಿದೆ. ಅವಳ ಮನವೊಲಿಸಲು ನಾನು ಅವಳ ಗ್ರಾಮಕ್ಕೆ ಹೋಗಬೇಕಾಗಿದೆ. ದಯವಿಟ್ಟು ನನ್ನ ರಜೆ ಅರ್ಜಿಯನ್ನು ಸ್ವೀಕರಿಸಿ ಎಂದು ಹಿಂದಿಯಲ್ಲಿ ಪತ್ರ ಬರೆಯಲಾಗಿದೆ. ಈಗ ವೈರಲ್ ಆಗಿರುವ ರಜೆ ಅರ್ಜಿಯನ್ನು ಬಿಡಿಒ ಅನುಮೋದಿಸಿದ್ದಾರೆ. ಅಹ್ಮದ್ ಅವರು ಕೆಲಸದಿಂದ ವಿರಾಮ ತೆಗೆದುಕೊಂಡು ಅವರ ಪತ್ನಿಯೊಂದಿಗಿನ ವಿವಾದವನ್ನು ಪರಿಹರಿಸಿಕೊಳ್ಳಬಹುದು ಎನ್ನಲಾಗಿದೆ.