ಪೊಲೀಸರಿಗೂ ಮಾನವೀಯತೆ ಇದೆ ಎಂಬುದು ಹಲವು ಬಾರಿ ಸಾಬೀತಾಗುತ್ತಲೇ ಇರುತ್ತದೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವುದು, ಹೀಗೆ ಹಲವು ವಿಧದಲ್ಲಿ ತಮ್ಮ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ ಈ ಕಾನೂನು ಪಾಲಕರು.
ಮೊನ್ನೆ ರಂಜಾನ್ ಹಬ್ಬದ ದಿನದಂದು ಕಾನ್ಪುರದ ಪೊಲೀಸ್ ಅಧಿಕಾರಿಯೊಬ್ಬರು ಇಂತಹದ್ದೇ ಜನ ಮೆಚ್ಚುವ ಕೆಲಸ ಮಾಡಿದ್ದಾರೆ.
ಅಂದು ಬೀದಿ ಬದಿಯ ಮುಸ್ಲಿಂ ವ್ಯಾಪಾರಿಯೊಬ್ಬ ಬಲೂನ್ ಗಳನ್ನು ಮಾರಾಟ ಮಾಡುತ್ತಿದ್ದ. ಒಂದು ಕಡೆ ಹಬ್ಬವನ್ನು ಆಚರಿಸಬೇಕೆಂಬ ಹಪಾಹಪಿ, ಇದನ್ನು ಪೂರೈಸಿಕೊಳ್ಳಬೇಕಾದರೆ ಅವನಲ್ಲಿದ್ದ ಬಲೂನುಗಳು ಮಾರಾಟವಾಗಿ ಅದರಿಂದ ಹಣ ಬರಬೇಕಿತ್ತು. ಮತ್ತೊಂದು ಕಡೆ ಮಕ್ಕಳ ಗುಂಪೊಂದು ಹಬ್ಬದ ದಿನ ಬಲೂನು ಪಡೆದು ಸಂತಸಪಡಲು ಹವಣಿಸುತ್ತಿದ್ದರು. ಆದರೆ, ಅವರ ಬಳಿ ಅಷ್ಟೊಂದು ಹಣವಿರಲಿಲ್ಲ.
ಇದನ್ನು ಸೂಕ್ಷ್ಮವಾಗಿ ಗಮನಿಸಿದ ಎಸಿಪಿ ತ್ರಿಪುರಾರಿ ಪಾಂಡೆ ಅವರು ಬೀದಿ ಬದಿ ವ್ಯಾಪಾರಿಯ ಬಳಿಗೆ ಹೋಗಿ ಆತನಲ್ಲಿದ್ದ ಎಲ್ಲಾ ಬಲೂನುಗಳನ್ನು ಖರೀದಿಸಿದರು. ಹೀಗೆ ಖರೀದಿಸಿದ ಬಲೂನುಗಳನ್ನು ಕಾಯುತ್ತಾ ಕುಳಿತ್ತಿದ್ದ ಮಕ್ಕಳೆಲ್ಲರಿಗೂ ಹಂಚಿದರು. ಒಂದು ವ್ಯಾಪಾರಿಗೆ ಕೈತುಂಬಾ ಹಣ ಬಂದು ಸಂತಸದಿಂದ ಹಬ್ಬ ಆಚರಿಸಿಕೊಳ್ಳಲು ಹೋದರೆ, ಮತ್ತೊಂದೆಡೆ ಬಲೂನು ಪಡೆಯಲೇಬೇಕೆಂದು ಕಾಯುತ್ತಿದ್ದ ಮಕ್ಕಳಿಗೆ ಬಲೂನು ಸಿಕ್ಕಿದ ಸಂತಸ ಇಮ್ಮಡಿಯಾಗಿತ್ತು.
ಈ ದೃಶ್ಯಾವಳಿಗಳನ್ನು ಪತ್ರಕರ್ತರೊಬ್ಬರು ಸೆರೆ ಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ವೀಕ್ಷಿಸಿದ ನೆಟ್ಟಿಗರು ಪೊಲೀಸ್ ಅಧಿಕಾರಿಯ ಮಹತ್ಕಾರ್ಯದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.