ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ. ಅನೇಕ ಸುದ್ದಿವಾಹಿನಿಗಳು ಅಯೋಧ್ಯೆಯಲ್ಲಿ ಜರುಗುತ್ತಿರುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ನಿರಂತರ ಸುದ್ದಿ ಪ್ರಸಾರ ಮಾಡುತ್ತಿವೆ. ಅಯೋಧ್ಯೆ ಮತ್ತು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಗ್ಗೆ ಮಾಹಿತಿ ನೀಡುತ್ತಿವೆ.
ಈ ಪ್ರಕ್ರಿಯೆಯಲ್ಲಿ ಕನ್ನಡದ ಪಬ್ಲಿಕ್ ವಾಹಿನಿಯ ನಿರೂಪಕ H.R. ರಂಗನಾಥ್ ಅವರ ಭಕ್ತಿ ಮತ್ತು ಗೌರವದ ನಡೆ ಗಮನ ಸೆಳೆದಿದೆ. ಶ್ರೀರಾಮನಿಗೆ ಗೌರವ ಸಲ್ಲಿಸುವ ಹೃದಯಸ್ಪರ್ಶಿ ಕ್ರಮದಲ್ಲಿ ನೇರಪ್ರಸಾರದಲ್ಲಿ ಟಿವಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಹೆಚ್.ಆರ್. ರಂಗನಾಥ್ ಚಪ್ಪಲಿ ಧರಿಸದೇ ರಾಮನ ಬಗ್ಗೆ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಈ ನಡೆ ಮೆಚ್ಚುಗೆ ಗಳಿಸಿದ್ದು ಫೋಟೋ ವೈರಲ್ ಆಗಿದೆ.
ಇದು ಭಗವಾನ್ ರಾಮನ ಬಗೆಗಿನ ಗೌರವದ ಸಂಕೇತವಾಗಿದೆ ಎಂದು ರಂಗನಾಥ್ ಅವರ ಅನನ್ಯ ಭಕ್ತಿಯ ಕಾರ್ಯಕ್ಕಾಗಿ ವ್ಯಾಪಕ ಮೆಚ್ಚುಗೆಯನ್ನು ಪಡೆದಿದೆ. ಈ ಚಿತ್ರವನ್ನು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು “ಇದು ಕನ್ನಡ ಟಿವಿ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ನಿರೂಪಕ ರಂಗನಾಥ್. ರಾಮ ಲಲ್ಲ ವಿಗ್ರಹವನ್ನು ವಿವರಿಸುವಾಗ ಚಪ್ಪಲಿ ಧರಿಸಿಲ್ಲ. ಇದು ನಮ್ಮ ಕರ್ನಾಟಕ” ಎಂದು ಬರೆದಿದ್ದಾರೆ.
ಹೆಬ್ಬಾಲೆ ರಾಮಕೃಷ್ಣಯ್ಯ ರಂಗನಾಥ್ ಎಂದೂ ಕರೆಯಲ್ಪಡುವ H.R. ರಂಗನಾಥ್ ಅವರು ರೈಟ್ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕರು.
ರಂಗನಾಥ್ ಅವರು ಮಾಧ್ಯಮ ವಲಯಗಳಲ್ಲಿ ನೇರ ಮತ್ತು ಪ್ರಾಮಾಣಿಕ ಪತ್ರಕರ್ತರಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ಕನ್ನಡ ಪ್ರಭದ ಮಾಜಿ ಪ್ರಧಾನ ಸಂಪಾದಕರಾಗಿ ಮತ್ತು ಸುದ್ದಿ ವಾಹಿನಿ ಸುವರ್ಣದ ಸಂಪಾದಕರಾಗಿ ಕೆಲಸ ಮಾಡಿದ್ದರು.