ಬೆಂಗಳೂರು: ಬರುವ ಶೈಕ್ಷಣಿಕ ವರ್ಷದಿಂದ ಕನ್ನಡ ತೃತೀಯ ಭಾಷೆ ಇರುವುದಿಲ್ಲ. ಎಂಟನೇ ತರಗತಿಯಿಂದ ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಕನ್ನಡ ಬೋಧನೆ ಕಡ್ಡಾಯವಾಗಿದೆ. ಕನ್ನಡ ಭಾಷಾ ಕಲಿಕಾ ಅಧಿನಿಯಮ 2015 ಜಾರಿಗೆ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಪಠ್ಯಪುಸ್ತಕ ಸಂಘ ರಾಜ್ಯದ ಎಲ್ಲಾ ಶಾಲೆಗಳಿಗೆ 2024 -25 ನೇ ಸಾಲಿನಲ್ಲಿ ಅವಶ್ಯವಿರುವ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ, ದಿನಚರಿಗಳ ಬೇಡಿಕೆ ಸಲ್ಲಿಸಲು ಸೂಚನೆ ನೀಡಿದೆ. ಈ ಆದೇಶದಲ್ಲಿ ಕನ್ನಡ ಭಾಷಾ ಅಧಿನಿಯಮದ ಪ್ರಕಾರ 2024 -25 ನೇ ಸಾಲಿನಿಂದ ಎಂಟನೇ ತರಗತಿ ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕಗಳು ಚಾಲ್ತಿಯಲ್ಲಿರುವುದಿಲ್ಲ. ಅನುಪಯುಕ್ತ ಪಠ್ಯ ಪುಸ್ತಕಗಳ ಬಗ್ಗೆ ಕೈಗೊಳ್ಳುವ ಬೇಕಿರುವ ಕ್ರಮಗಳ ಕುರಿತು ಮುಂದಿನ ದಿನಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡುವುದಾಗಿ ತಿಳಿಸಲಾಗಿದೆ.
ಮುಂದಿನ ಶೈಕ್ಷಣಿಕ ಸಾಲಿನಿಂದ ಎಂಟನೇ ತರಗತಿಗೆ ತೃತೀಯ ಭಾಷೆಯ ಕನ್ನಡ ಪಠ್ಯಪುಸ್ತಕಗಳು ಚಾಲ್ತಿಯಲ್ಲಿ ಇರಲ್ಲ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವ ನಿಟ್ಟಿನಲ್ಲಿ ತೃತೀಯ ಭಾಷೆ ಕನ್ನಡ ಪಠ್ಯಪುಸ್ತಕ ಮುದ್ರಣ ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ.