ಬೆಳಗಾವಿ: ರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಮಹಾರಾಷ್ಟ್ರ ಗಡಿ ವಿಚಾರವಾಗಿ ಮತ್ತೆ ಕ್ಯಾತೆ ತೆಗೆಯಲು ಆರಂಭಿಸಿದೆ. ಬೆಳಗಾವಿ ಗಡಿ ಗ್ರಾಮಗಳಲ್ಲಿ ತನ್ನ ಸರ್ಕಾರದ ಆರೋಗ್ಯ ಯೋಜನೆ ಜಾರಿಗೆ ಮುಂದಾಗಿರುವ ಬೆನ್ನಲ್ಲೇ ಈಗ ರಾಜ್ಯೋತ್ಸವದ ದಿನದಂದು ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನಾಚರಣೆ ನಡೆಸಲು ತೀರ್ಮಾನಿಸಿದೆ. ಎಂಇಎಸ್ ಪುಂಡಾಟಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬೆಂಬಲ ಘೋಷಿಸಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿ-ಎಂಇಎಸ್ ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ದಿನ ನವೆಂಬರ್ 1ರಂದು ಬೆಳಗಾವಿಯಲ್ಲಿ ಕರಾಳ ದಿನಾಚರಣೆ ನಡೆಸುತ್ತದೆ. ಈವರ್ಷವೂ ಕರಾಳ ದಿನಾಚರಣೆಗೆ ಸಿದ್ಧತೆ ನಡೆಸಿದೆ. ಈ ಬಾರಿ ಎಂಇಎಸ್ ನ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬೆಂಬಲ ನೀಡುವ ಮೂಲಕ ಗಡಿ ವಿವಾದಕ್ಕೆ ಇನ್ನಷ್ಟು ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ.
ನವೆಂಬರ್ 1ರಂದು ಎಂಇಎಸ್ ನಡೆಸಲಿರುವ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಪ್ರತಿನಿಧಿಯನ್ನು ಕಳುಹಿಸುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದಿದ್ದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಕರಾಳ ದಿನಾಚರಣೆಗೆ ಅವಕಾಶವಿಲ್ಲ ಎಂದು ಎಂಇಎಸ್ ಗೆ ಸ್ಪಷ್ಟಪಡಿಸಿದ್ದರು. ಅಲ್ಲದೇ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ, ಮಹಾರಾಷ್ಟ್ರ ನಾಯಕರಿಗೂ ಬೆಳಗಾವಿ ಪ್ರವೇಶಕ್ಕೆ ಬಿಡುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದರು. ಆದಾಗ್ಯೂ ಎಂಇಎಸ್ ಕರಾಳ ದಿನಾಚರಣೆಗೆ ಸಜ್ಜಾಗುವ ಮೂಲಕ ಉದ್ಧಟತನ ಮೆರೆಯಲು ಮುಂದಾಗಿದೆ.