ಬೆಂಗಳೂರು: 2024-25ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ನೇತೃತ್ವದ ಸಲಹಾ ಸಮಿತಿ 36 ಸದಸ್ಯರು ಹಾಗೂ 13 ಪದನಿಮಿತ್ತ ಸದಸ್ಯರನ್ನು ಒಳಗೊಂಡಿದೆ.
ನವೆಂಬರ್ 1ರಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯಲಿರುವ 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ-50ರ ಸಮಾರೋಪ ಸಮಾರಂಭ ಹಿನ್ನೆಲೆಯಲ್ಲಿ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರ ಆಯ್ಕೆಗೆ 50 ಸದಸ್ಯರ ಸಲಹಾ ಸಮಿತಿ ರಚನೆ ಮಾಡಿದೆ.
ಸೇವಾಸಿಂಧು ವೆಬ್ ಪೋರ್ಟಲ್ ಮೂಲಕವೂ ಸಾಧಕರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಅವಕಾಶ ನಿಡಲಾಗಿದೆ. ಸಚಿವ ಶಿವರಾಜ್ ತಂಗಡಗಿ ನೇತೃತ್ವದ ಸಲಹಾ ಸಮಿತಿ ಮುಂದಿನ ವಾರದಿಂದಲೇ ಪರಿಶೀಲನೆ ನಡೆಸಲಿದೆ.