
ಮೈಸೂರು: ಕನ್ನಡದ ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರ ವಂಶವೃಕ್ಷ ಕೃತಿಯನ್ನು ಅನಧಿಕೃತವಾಗಿ ತೆಲುಗು ಭಾಷೆಗೆ ಅನುವಾದಿಸಿ ಪ್ರಕಟಿಸಿ ಕಾಪಿ ರೈಟ್ ಉಲ್ಲಂಘಿಸಿದ್ದ ಹೈದರಾಬಾದ್ ನ ಪ್ರಿಯದರ್ಶಿನಿ ಪ್ರಚುರಾಣಣ್ಣಲು ಪ್ರಕಾಶನ ವತ್ಸಲಾ ಅವರು 5.05 ಲಕ್ಷ ರೂ. ನಷ್ಟ ಪರಿಹಾರ ನೀಡಬೇಕೆಂದು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಭೈರಪ್ಪ ಅವರು ವಂಶವೃಕ್ಷ ಕಾದಂಬರಿಯನ್ನು ತೆಲುಗು ಭಾಷೆಗೆ ಅನುವಾದಿಸುವ ಹಕ್ಕನ್ನು ಸನಗರಂ ನಾಗಭೂಷಣಂ ಎಂಬುವರಿಗೆ ನೀಡಿದ್ದರು. ಅವರು ವಂಶವೃಕ್ಷಂ ಎಂಬ ಹೆಸರಿನಲ್ಲಿ ತೆಲುಗು ಭಾಷೆಗೆ ಅನುವಾದಿಸಿದ್ದರು. ಈ ಮಧ್ಯೆ ಹೈದರಾಬಾದ್ ನ ಪ್ರಿಯದರ್ಶಿನಿ ಪ್ರಚುರಾಣಣ್ಣಲು ಪ್ರಕಾಶನದ ಸಂಪಾದಕಿ ವತ್ಸಲಾ ಅವರು ವಂಶವೃಕ್ಷ ಕೃತಿಯನ್ನು ಹೊಸದಾಗಿ ಪ್ರಕಟಿಸಿದ್ದರು. ಪುಸ್ತಕಕ್ಕೆ 360 ರೂಪಾಯಿ ಬೆಲೆ ನಿಗದಿಪಡಿಸಿದ್ದರು.
ಇದು ಕಾಫಿ ರೇಟ್ ಉಲ್ಲಂಘನೆಯಾಗಿದೆ ಎಂದು 2021ರ ನವೆಂಬರ್ 15ರಂದು 5.05 ಲಕ್ಷ ಪರಿಹಾರ ನೀಡಲು ಸೂಚಿಸಿ ವತ್ಸಲಾ ಅವರಿಗೆ ನೋಟಿಸ್ ನೀಡಲಾಗಿತ್ತು. ಬೈರಪ್ಪ ಅವರು ನೋಟಿಸ್ ನೀಡಿ ಅನಧಿಕೃತವಾಗಿ ಪ್ರಕಟಿಸಿದ ವಂಶವೃಕ್ಷಂ ಪ್ರತಿಗಳನ್ನು ಮಾರಾಟ ಮಾಡದಂತೆ ಮುದ್ರಿತ ಪ್ರತಿಗಳನ್ನು ತಮಗೆ ಒಪ್ಪಿಸುವುದಂತೆ ಸೂಚಿಸಿದ್ದರು. ಹಕ್ಕು ಸ್ವಾಮ್ಯ ಕಾಯ್ದೆ ಉಲ್ಲಂಘಿಸಿದ್ದಕ್ಕೆ 5 ಲಕ್ಷ ಪರಿಹಾರ ನೀಡುವಂತೆ ಕೋರಿದ್ದರು. ಇದಕ್ಕೆ ವತ್ಸಲಾ ಅವರು ಸ್ಪಂದಿಸಿರಲಿಲ್ಲ.
ಹೀಗಾಗಿ 5.05 ಲಕ್ಷ ರೂ. ನಷ್ಟ ಪರಿಹಾರ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದಲ್ಲಿ ಕೋರ್ಟ್ ಕಮಿಷನರ್ ಜೆ. ರಾಘವೇಂದ್ರ ಬೈರಪ್ಪ ಅವರ ಮನೆಗೆ ತೆರಳಿ ಅವರ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದರು. ನಂತರ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ ಅವರು 5.05 ಲಕ್ಷ ರೂ.ಗಳನ್ನು ಬೈರಪ್ಪ ಅವರಿಗೆ ನೀಡಬೇಕು ಎಂದು ಆದೇಶ ನೀಡಿದ್ದು, ಮುದ್ರಿತ ಎಲ್ಲಾ ಪ್ರತಿಗಳನ್ನು ಒಪ್ಪಿಸುವಂತೆ ವತ್ಸಲಾ ಅವರಿಗೆ ಸೂಚಿಸಿದ್ದಾರೆ. ಅನುವಾದಿತ ಕೃತಿಯನ್ನು ಮರುಮುದ್ರಿಸದಂತೆ ಹಾಗೂ ಮಾರಾಟ ಮಾಡದಂತೆ ನಿರ್ಬಂಧಕಾಜ್ಞೆ ಹೊರಡಿಸಿ ತೀರ್ಪು ನೀಡಿದ್ದಾರೆ. ಸಾಹಿತಿ ಭೈರಪ್ಪನವರ ಪರವಾಗಿ ವಕೀಲ ಓ. ಶ್ಯಾಮ್ ಭಟ್ ವಕಾಲತ್ತು ವಹಿಸಿದ್ದರು.