ಬೆಂಗಳೂರು: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಅಳವಡಿಕೆಗೆ ರಾಜ್ಯ ಸರ್ಕಾರ ಇಂದು ಅಂತಿಮ ಗಡುವು ನೀಡಿತ್ತು. ಇದೀಗ ಬಿಬಿಎಂಪಿ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಹಾಕಲು ಮತ್ತೆ ಒಂದು ದಿನ ಗಡುವು ವಿಸ್ತರಿಸಿದೆ.
ಈ ಕುರಿತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದು, ಮಳಿಗೆಗಳಲ್ಲಿ ಕನ್ನಡ ನಾಮಫಲಕ ಹಾಕಲು ಮತ್ತೊಂದು ದಿನ ಅವಕಾಶ ನೀಡಲಾಗಿದೆ. ನಾಳೆ ಸಂಜೆಯೊಳಗೆ ಕನ್ನಡ ನಾಮಫಲಕ ಹಾಕದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕನ್ನಡ ನಾಮಫಲಕಗಳನ್ನು ಅಳವಡಿಸದಿದ್ದರೆ ಅಂಗಡಿ, ಮಳಿಗೆಗಳನ್ನು ಬಂದ್ ಮಾಡಲಾಗುವುದು. ಈಗಾಗಲೇ ಶೇ.90ರಷ್ಟು ಕನ್ನಡ ನಾಮಫಲಕ ಹಾಕಲಾಗಿದೆ. ಇನ್ನು ಉಳಿದಿರುವುದು 3000 ನಾಮಫಲಕಗಳು ಮಾತ್ರ. ಅಂತರಾಷ್ಟ್ರೀಯ ಕಂಪನಿಗಳು, ಎಸ್ ಬಿಐ, ಕೇನರಾ ಬ್ಯಾಂಕ್ ಕನ್ನಡ ನಾಮಫಲಕ ಅಳವಡಿಕೆಗೆ ಮತ್ತಷ್ಟು ದಿನ ಗಡುವು ನೀಡುವಂತೆ ಮನವಿ ಮಾಡಿವೆ. ಈ ಬಗ್ಗೆ ನಾಳೆ ಸಂಜೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.