ನವದೆಹಲಿ: ಕೇಂದ್ರ ಸರ್ಕಾರ ಕನ್ನಡಿಗರ ಹೋರಾಟಕ್ಕೆ ಮಣಿದಿದ್ದು, ಕನ್ನಡ, ಕೊಂಕಣಿ ಸೇರಿದಂತೆ 13 ಭಾಷೆಗಳಲ್ಲಿ ಕೇಂದ್ರ ಸಸಸ್ತ್ರ ಪೊಲೀಸ್ ಪಡೆ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ.
ಕನ್ನಡ, ಕೊಂಕಣಿ, ತೆಲುಗು, ತಮಿಳು, ಮಲಯಾಳಂ, ಅಸ್ಸಾಂ, ಬೆಂಗಾಳಿ, ಗುಜರಾತಿ, ಮರಾಠಿ, ಉರ್ದು, ಪಂಜಾಬಿ, ಮಣಿಪುರ, ಒಡಿಯಾ ಭಾಷೆಗಳಲ್ಲಿ ಕೂಡ ಪರೀಕ್ಷೆ ಬರೆಯಬಹುದಾಗಿದೆ. ಕೇಂದ್ರೀಯ ಮೀಸಲು ಪಡೆಯ 9212 ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಈಗ ಹಿಂದಿ, ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಕೇಂದ್ರ ಗೃಹ ಇಲಾಖೆ ಅಡಿ ಬರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಇಂಡೋ ಟಿಬೇಟಿಯನ್ ಬಾರ್ಡ್ ಪೊಲೀಸ್, ಸಶಸ್ತ್ರ ಸೀಮಾ ಬಲ, ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ನೇಮಕಾತಿ ಪರೀಕ್ಷೆಗಳಿಗೆ ಈ ಆದೇಶ ಅನ್ವಯವಾಗುತ್ತದೆ. 2024ರ ಜನವರಿ 1ರ ನಂತರ ನಡೆಸುವ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷಾ ನಿಯಮ ಜಾರಿಗೆ ಬರಲಿದ್ದು, ಪ್ರಸ್ತುತ ಅರ್ಜಿ ಆಹ್ವಾನಿಸಿದ ಹುದ್ದೆಗಳಿಗೆ ಅಥವಾ 2024ರ ಒಳಗೆ ಅರ್ಜಿ ಆಹ್ವಾನಿಸುವ ನೇಮಕಾತಿಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲವೆಂದು ಹೇಳಲಾಗಿದೆ.