ಬೆಂಗಳೂರು: ವಿಧಾನಮಂಡಲ ಬಜೆಟ್ ಅಧಿವೇಶನದ 5ನೇ ದಿನವಾದ ಇಂದು ವಿಧಾನಸಭೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ವಿಧೇಯಕ ಅಂಗೀಕರಿಸಲಾಯಿತು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ ನಾಮಫಲಕಗಳು ಸೇರಿದಂತೆ ರಾಜ್ಯದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಆದೇಶವನ್ನು ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿತ್ತು. ರಾಜ್ಯಪಾಲರು ಸುಗ್ರೀವಾಜ್ಞೆ ಯನ್ನು ಸರ್ಕಾರಕ್ಕೆ ವಪಾಸ್ ಕಳುಹಿಸಿ ಸದನದಲ್ಲಿ ವಿಧೇಯಕ ಮಂಡಿಸಿ ಅಂಗೀಕರಿಸುವಂತೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಫೆ.14ರಂದು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡಿಸಿತ್ತು. ಇದೀಗ ವಿಧಾನಸಭೆಯಲ್ಲಿ ವಿಧೇಯಕವನ್ನು ಅಂಗೀಕಾರಪಡಿಸಲಾಗಿದೆ.
ನಾಮಫಲಕಗಳು, ಸೂಚನಾ ಫಲಕಗಳು, ವಾಣಿಜ್ಯ, ಕೈಗಾರಿಕೆ, ವ್ಯವಹಾರ ಉದ್ಯಮ, ಟ್ರಸ್ಟ್, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನೋರಂಜನಾ ಕೇಂದ್ರ, ಹೋಟೆಲ್ ಸೇರಿದಂತೆ ನಾಮಫಲಕಗಳು ಸೇರಿದಂತೆ ಎಲ್ಲದರಲ್ಲಿಯೂ ಶೇ.60ರಷ್ಟು ಕನ್ನಡ ಕಡ್ಡಾಯ ಸುಗ್ರೀವಾಜ್ಞೆಗೆ ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು.