ಬೆಂಗಳೂರು : ರಾಜ್ಯದಲ್ಲಿ ತಯಾರಿಸುವ ಉತ್ಪನ್ನಗಳ ಮೇಲೆ ‘ಕನ್ನಡ’ ದಲ್ಲಿಯೂ ಹೆಸರು ಬರೆಯುವುದನ್ನು ಕಡ್ಡಾಯ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 69 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ತಯಾರಿಸುವ ಉತ್ಪನ್ನಗಳ ಮೇಲೆ ಇಂಗ್ಲೀಷ್ ನಲ್ಲಿ ಬರೆಯಲಾಗುತ್ತಿದೆ. ಇನ್ನುಂದೆ ‘ಕನ್ನಡ’ ದಲ್ಲಿಯೂ ಹೆಸರು ಬರೆಯುವುದನ್ನು ಕಡ್ಡಾಯ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ, ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ಎರಡನೇ ರಾಜ್ಯವಾಗಿದೆ. 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ನೀಡಿದರೂ, ಕೇಂದ್ರದಿಂದ ದೊರೆಯುವ ತೆರಿಗೆ ಪಾಲು ಕೇವಲ 50-60 ಸಾವಿರ ಕೋಟಿ ಮಾತ್ರ. ಕನ್ನಡ ನಾಡು ಮುಂದುವರೆದಿದೆ ಎಂದು ಕೇಂದ್ರ ಸರ್ಕಾರ ನಮಗೆ ಅನ್ಯಾಯವೆಸಗಬಾರದು. ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ತೆರಿಗೆ ಪಾಲನ್ನು ನೀಡಿ ಎಂದು ಕೇಂದ್ರಕ್ಕೆ ನಮ್ಮ ಬೇಡಿಕೆಗೆ ರಾಜಕೀಯ ಬಣ್ಣವನ್ನು ಬಳಿಯಲಾಗುತ್ತಿದೆ. ನಮ್ಮ ಹಕ್ಕಿಗೆ ಹೋರಾಡಬೇಕಾಗಿದೆ. ರಾಜ್ಯದ ಸಂಸದರು ಕೇಂದ್ರಕ್ಕೆ ಹೋಗಿದ್ದು, ಕೇಂದ್ರದಲ್ಲಿ ಕನ್ನಡಪರ ಧ್ವನಿ ಎತ್ತಬೇಕು. ಈ ಶಕ್ತಿಯನ್ನು ಆಯ್ಕೆಯಾಗಿ ಹೋದವರು ಬೆಳೆಸಿಕೊಂಡರೆ ರಾಜ್ಯಕ್ಕೆ ನ್ಯಾಯ ದೊರೆಯುತ್ತದೆ. ಕೇಂದ್ರದ ಅನ್ಯಾಯದ ನಡುವೆಯೂ, ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಪ್ರತಿ ದಿನ 57 ಲಕ್ಷ ಶಾಲಾ ಮಕ್ಕಳಿಗೆ ವಾರದ ಆರೂ ದಿನಗಳು ಮೊಟ್ಟೆ ಹಾಗೂ ಚಿಕ್ಕಿಯನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಹಾಲಿನ ಜೊತೆ ಸಾಯಿ ಅನ್ನಪೂರ್ಣ ಅವರ ಸಹಯೋಗದೊಂದಿಗೆ ರಾಗಿಮಾಲ್ಟನ್ನೂ ನೀಡಲಾಗುತ್ತಿದೆ. ಬಡವರ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು, ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದು ಸರ್ಕಾರದ ಉದ್ದೇಶ. ಇಂದು ಕನ್ನಡ ದೀವಿಗೆ ಪುಸ್ತಕವನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡಲಾಗಿದೆ.
ರಾಜ್ಯದಲ್ಲಿ ಸುಮಾರು 200ಕ್ಕೂ ಹೆಚ್ಚು ಭಾಷೆಗಳಿವೆ. ಇಲ್ಲಿಯ ಅನ್ನ, ನೀರು, ಗಾಳಿ ಸೇವಿಸಿದ ಮೇಲೆ ಪ್ರತಿಯೊಬ್ಬರೂ ಕನ್ನಡಿಗರಾಗುತ್ತಾರೆ. ಯಾವುದೇ ಭಾಷೆ, ಧರ್ಮ, ಜಾತಿಗೆ ಸೇರಿದವರೇ ಆಗಿರಲಿ ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಿಗರು. ಹೀಗಾಗಿ ಕನ್ನಡಿದಲ್ಲಿಯೇ ವ್ಯವಹರಿಸೋಣ, ಇತರರಿಗೂ ಕನ್ನಡ ಕಲಿಸೋಣ. ಬೇರೆ ಭಾಷೆಗಳನ್ನು ಗೌರವಿಸೋಣ ಆದರೆ ನೆಲದ ಭಾಷೆ ಕನ್ನಡವನ್ನು ಪ್ರೀತಿಸೋಣ.
ಕರ್ನಾಟಕ ಮುಂದುವರೆದ ರಾಜ್ಯವೆಂದು ನ್ಯಾಯಯುತ ಅನುದಾನ ನೀಡದೆ ನಮಗೆ ಅನ್ಯಾಯ ಮಾಡಲಾಗುತ್ತಿದೆ. ಹಸು ಹಾಲು ಕೊಡುತ್ತದೆ ಎಂದು ಅಷ್ಟೂ ಹಾಲನ್ನು ಕರೆದರೆ ಕರು ಬಡವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹೀಗಾಗಿ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯಗಳ ವಿರುದ್ಧ ಸಮಸ್ತ ಕನ್ನಡಿಗರು ಧ್ವನಿಯೆತ್ತಬೇಕಿದೆ ಎಂದರು.