ಬೆಂಗಳೂರು: ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಸ್ನಾತಕ ಪದವಿಯಲ್ಲಿ ಕನ್ನಡ ಭಾಷೆಯ ಕಲಿಕೆ ಕಡ್ಡಾಯ ನಿಯಮ ಕೈಬಿಡಲಾಗಿದೆ.
ರಾಜ್ಯ ಸರ್ಕಾರ ಕನ್ನಡ ಕಡ್ಡಾಯ ಕಲಿಕೆ ವಿಚಾರ ಕೈಬಿಟ್ಟಿದೆ. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದ್ದು, ಕಲಿಕೆಯ ಐಚ್ಛಿಕವಾಗಿರುತ್ತದೆ. ವಿದ್ಯಾರ್ಥಿಗಳು ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಲು ಇಚ್ಛಿಸದಿದ್ರೆ ನ್ಯಾಯಾಲಯದ ಅಂತಿಮ ಆದೇಶದವರೆಗೆ ಅದನ್ನು ಕಡ್ಡಾಯಗೊಳಿಸದಂತೆ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ದೇಶದಲ್ಲೇ ಮೊದಲ ಬಾರಿಗೆ 2021 -22 ನೇ ಸಾಲಿನಿಂದ ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಎನ್ಇಪಿ ಅನುಷ್ಠಾನಗೊಳಿಸಲಾಗಿದೆ. ಇದರ ಆಶಯದಂತೆ ಸ್ಥಳೀಯ ಭಾಷೆಗಳಿಗೆ ಉತ್ತೇಜನ ನೀಡಲು ಎಲ್ಲ ವಿವಿ ಮತ್ತು ಪದವಿ ಕಾಲೇಜುಗಳಲ್ಲಿ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಎರಡು ವರ್ಷ ಕನ್ನಡ ಕಲಿಕೆ ಕಡ್ಡಾಯಗೊಳಿಸಲಾಗಿತ್ತು.
ಸರ್ಕಾರದ ಈ ಕ್ರಮಕ್ಕೆ ಕೆಲವು ಖಾಸಗಿ ಪದವಿ ಕಾಲೇಜು ಮತ್ತು ಖಾಸಗಿ ವಿವಿಗಳು ವಿರೋಧ ವ್ಯಕ್ತಪಡಿಸಿದ್ದವು. ಕನ್ನಡ ಕಲಿಕೆ ಕಡ್ಡಾಯ ಮಾಡಿದರೆ ಪಿಯುಸಿ ಹಂತದಲ್ಲಿ ಕನ್ನಡ ಕಲಿಯದ ಮತ್ತು ಹೊರ ರಾಜ್ಯದ ಹಾಗೂ ಹೊರದೇಶದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಅವರು ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಸೇರಲು ಹಿಂದೇಟು ಹಾಕುತ್ತಾರೆ ಎನ್ನುವ ಆಕ್ಷೇಪ ಕೇಳಿ ಬಂದಿತ್ತು.
ಈ ಕುರಿತಾಗಿ ಕೆಲವು ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಕನ್ನಡ ಕಡ್ಡಾಯ ಕಲಿಕೆ ಬಗ್ಗೆ ಪರಿಶೀಲನೆ ಅಗತ್ಯವಿದ್ದು, ಸರ್ಕಾರ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಬಾರದು. ಆಸಕ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಮುಂದಿನ ಆದೇಶದವರೆಗೆ ಕನ್ನಡ ಕಲಿಕೆ ಕಡ್ಡಾಯ ಮಾಡಬಾರದು ಎಂದು ಹೇಳಿತ್ತು.