ಬೆಂಗಳೂರು: ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ವಿಜ್ಞಾನ ಪಠ್ಯ ಕಲಿಸಲು ಚಿಂತನೆ ನಡೆದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆ ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ.
ಸರ್ಕಾರಿ ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಳ್ಳುವಂತೆ ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಜ್ಞಾನದ ದ್ವಿಭಾಷಾ ಪಠ್ಯ ಅವರ ತರಲು ಚಿಂತನೆ ನಡೆದಿದೆ. ವಿಜ್ಞಾನವನ್ನು ಸುಲಭವಾಗಿ ಅರ್ಥೈಸಿಕೊಳ್ಳುವಂತೆ ನೂರಕ್ಕೂ ಹೆಚ್ಚು ವಿಜ್ಞಾನದ ಮೂಲ ಪರಿಕಲ್ಪನೆಗಳನ್ನು ಡಿಜಿಟಲ್ ಮಾಡುವಂತೆ ಅಧೀನ ಸಂಸ್ಥೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಸೂಚನೆ ನೀಡಿದ್ದಾರೆ.
ಎಂಟರಿಂದ ಹತ್ತನೇ ತರಗತಿಯಲ್ಲಿ ವಿಜ್ಞಾನ ಪಠ್ಯದಲ್ಲಿ ಪ್ರಸ್ತುತ ಇರುವ ಕನ್ನಡ ಪಠ್ಯದ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ಭಾಷಾಂತರ ನೀಡಿದಾಗ ಮಕ್ಕಳಿಗೆ ಅನುಕೂಲವಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಇಂಗ್ಲಿಷ್ ನಲ್ಲಿಯೂ ವಿಜ್ಞಾನದ ಪಠ್ಯ ಓದುವುದರಿಂದ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುವಾಗ ಕಷ್ಟ ಎನಿಸುವುದಿಲ್ಲ. ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಕನ್ನಡದಲ್ಲಿ ಬರೆದರೂ ಪಿಯುಸಿಯಲ್ಲಿ ಸೈನ್ಸ್ ಓದಲು ಅನುಕೂಲವಾಗುತ್ತದೆ. ಹೀಗಾಗಿ, ಪ್ರೌಢಶಾಲೆ ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ವಿಜ್ಞಾನ ಪಠ್ಯ ಕಲಿಸುವ ಚಿಂತನೆ ಇದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.