ಬೆಂಗಳೂರು: ಈ ವರ್ಷದಿಂದಲೇ ಕನ್ನಡದಲ್ಲಿ ಇಂಜಿನಿಯರಿಂಗ್ ಕಲಿಯಬಹುದಾಗಿದೆ. ಭಾಷಾಂತರ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ ನಿಂದ ಮೊದಲ ಸೆಮಿಸ್ಟರ್ ಪಾಠ ಶುರುವಾಗಲಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಈ ನಿಟ್ಟಿನಲ್ಲಿ ಸಿದ್ಧತೆ ಕೈಗೊಂಡಿದೆ. 5 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ತರಗತಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಇನ್ನೂ ಹಲವು ಕಾಲೇಜುಗಳಲ್ಲಿಯೂ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಪಾಠ ಮಾಡಲು ತಯಾರಿ ನಡೆದಿದೆ.
ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಕೋರ್ಸ್ ಕಷ್ಟವಾಗುತ್ತದೆ ಎಂಬ ಅಭಿಪ್ರಾಯಗಳಿವೆ. ಇಂಗ್ಲಿಷ್ ಭಾಷಾ ಕೌಶಲ್ಯದ ಕೊರತೆಯ ಕಾರಣದಿಂದ ಇಂಜಿನಿಯರಿಂಗ್ ಕೋರ್ಸ್ ಸೇರಲು ಗ್ರಾಮೀಣ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಅರ್ಧಕ್ಕೆ ಬಿಡುತ್ತಾರೆ. ಈ ಕಾರಣದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡದಲ್ಲಿಯೂ ಇಂಜಿನಿಯರಿಂಗ್ ಪಾಠ ಮಾಡಲಾಗುವುದು.
ಪ್ರಾದೇಶಿಕ ಭಾಷೆಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ನೀಡುವ ಬಗ್ಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದ್ದು, ಕೇಂದ್ರ ಸರ್ಕಾರ ಇಂಗ್ಲಿಷ್ ಜೊತೆಗೆ ಪ್ರಾದೇಶಿಕ ಭಾಷೆಯಲ್ಲಿಯೂ ಇಂಜಿನಿಯರಿಂಗ್ ಕೋರ್ಸ್ ಬೋಧನೆಗೆ ಕ್ರಮಕೈಗೊಳ್ಳಲಾಗುವುದು.