ಬೆಂಗಳೂರು: CBSE, ICSE, ಅಂತರರಾಷ್ಟ್ರೀಯ ಮಂಡಳಿ ಸೇರಿದಂತೆ ಕೇಂದ್ರೀಯ ಪಠ್ಯಕ್ರಮದ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಭೋದಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ.
ನಿಯಮಗಳಿಗೆ ತಿದ್ದುಪಡಿ ತಂದು ರಾಜ್ಯ ಸರ್ಕಾರದಿಂದ ರಾಜ್ಯ ಪತ್ರ ಹೊರಡಿಸಲಾಗಿದೆ. ಈ ನಿಯಮ ಅನುಸರಿಸಿದಲ್ಲಿ ಮಾತ್ರ ಖಾಸಗಿ ಶಾಲೆಗಳನ್ನು ನಡೆಸಲು ರಾಜ್ಯ ಸರ್ಕಾರದ ನಿರಾಕ್ಷೇಪಣಾ ಪತ್ರ ದೊರೆಯಲಿದೆ ಎಂದು ಹೇಳಲಾಗಿದೆ.
ಈ ಹಿಂದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೇಕೆಂಬ ನಿಯಮ ಇತ್ತಾದರೂ ಇದನ್ನು ತಿದ್ದುಪಡಿ ಮಾಡಿ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಭೋದಿಸಲು ಕರಡು ನಿಯಮಾವಳಿ ರೂಪಿಸಿ 2022 ಮೇ 13 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕೆ ರಾಜ್ಯದ ಎಲ್ಲಾ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಶಿಕ್ಷಣ ತಜ್ಞರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ನಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ನಂತರ ಈ ನಿಯಮಾವಳಿಗೆ ತಿದ್ದುಪಡಿ ಮಾಡಿ ಕನ್ನಡವನ್ನು ಪ್ರಥಮ ಹಾಗೂ ದ್ವಿತೀಯ ಭಾಷೆಯಾಗಿ ಬೋಧಿಸಲು ಕಳೆದ ವರ್ಷ ಮಾರ್ಚ್ ನಲ್ಲಿ ಹೊಸ ಕರಡು ನಿಯಮಾವಳಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದಕ್ಕೆ ಆಕ್ಷೇಪಣೆಗಳು ಬಾರದ ಹಿನ್ನೆಲೆಯಲ್ಲಿ ಮೊದಲಿನಂತೆಯೇ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಲಿಸಬೇಕೆಂದು ಅಧಿಕೃತ ರಾಜ್ಯಪತ್ರ ಹೊರಡಿಸಲಾಗಿದೆ ಎನ್ನಲಾಗಿದೆ.