ಬೆಂಗಳೂರು: ಗೋವಾದಲ್ಲಿ ನೆಲೆಸಿರುವ ಕನ್ನಡಿಗರಿಗೆ ಶಕ್ತಿ ತುಂಬವ ನಿಟ್ಟಿನಲ್ಲಿ ಕನ್ನಡ ಭವನ ನಿರ್ಮಿಸಲಾಗುವುದು. ಇದಕ್ಕಾಗಿ ಖಾಸಗಿಯವರಿಂದ ಜಾಗ ಖರೀದಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಶನಿವಾರ ಗೋವಾಕ್ಕೆ ಭೇಟಿ ನೀಡಿದ ಅವರು, ದಕ್ಷಿಣ ಗೋವಾದ ಜುವಾರಿ ನಗರದಲ್ಲಿ ಕನ್ನಡಿಗರ ಸಮಸ್ಯೆ ಆಲಿಸಿದರು. ಗೋವಾದಲ್ಲಿ ಕನ್ನಡಿಗರಿಗಾಗಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಗೋವಾ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಜಾಗ ನೀಡಿಲ್ಲ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಲ್ಲಿನ ಸರ್ಕಾರಗಳೇ ಜಾಗ ನೀಡಿವೆ. ಗೋವಾ ಸರ್ಕಾರ ನಿರ್ಲಕ್ಷ ತೋರಿದೆ. ಹೀಗಾಗಿ ಖಾಸಗಿಯವರಿಂದ ಒಂದು ಎಕರೆ ಜಾಗ ಖರೀದಿಸಿ ಕನ್ನಡ ಭವನ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ್ ಮತ್ತಿಹಳ್ಳಿ, ಗೋವಾ ಕನ್ನಡ ಸಾಹಿತ್ಯ ಪರಿಷತ್, ಗೋವಾ ರಕ್ಷಣಾ ವೇದಿಕೆ ಸೇರಿದಂತೆ ಗೋವಾ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಇದ್ದರು. ದಕ್ಷಿಣ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿವರಾಜ್ ತಂಗಡಗಿ ಜಾಗಗಳನ್ನು ಪರಿಶೀಲಿಸಿದರು.