ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕನ್ನಡಿಗರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಕನ್ನಡದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಮಗ್ರ ಮಸೂದೆಯೊಂದನ್ನು ಡಿಸೆಂಬರ್ ನಲ್ಲಿ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಮಂಗಳೂರಿನಲ್ಲಿ ಈ ವಿಷಯ ತಿಳಿಸಿದ್ದು, ಉದ್ಯೋಗದಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಸಿಗಬೇಕಿದೆ. ನ್ಯಾಯಾಲಯಗಳಲ್ಲೂ ಕಲಾಪ ಕನ್ನಡದಲ್ಲಿ ನಡೆಯಬೇಕಿದ್ದು, ಜೊತೆಗೆ ಸರ್ಕಾರದ ಸುತ್ತೋಲೆಗಳು ಕನ್ನಡದಲ್ಲಿಯೇ ಇರಬೇಕು ಎಂಬ ಉದ್ದೇಶದಿಂದ ಕನ್ನಡ ಸಮಗ್ರ ಮಸೂದೆಯನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ ಗಡಿ ಗ್ರಾಮಗಳ ಅಭಿವೃದ್ಧಿಗಾಗಿ 21 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಹೊರರಾಜ್ಯಗಳ ಕನ್ನಡಿಗರ ಹಿತ ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 34 ಮಂದಿಗೆ ಹಾಗೂ 20 ಸಂಘ ಸಂಸ್ಥೆಗಳಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.