ರಾಜಸ್ಥಾನದ ಉದಯ್ ಪುರದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಕನ್ನಯ್ಯ ಲಾಲ್ ಎಂಬ ಟೈಲರ್ ಬರ್ಬರವಾಗಿ ಹತ್ಯೆಯಾಗಿದ್ದು, ದುಡಿಯುವ ಕೈಗಳನ್ನು ಕಳೆದುಕೊಂಡು ಆ ಕುಟುಂಬ ಅನಾಥವಾಗಿದೆ. ಹೀಗಾಗಿಯೇ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಕನ್ನಯ್ಯ ಲಾಲ್ ಕುಟುಂಬಕ್ಕೆ ನೆರವಾಗಲು ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದು, ಇದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇವಲ ಒಂದು ದಿನದಲ್ಲಿ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಹಣ ಹರಿದು ಬಂದಿದ್ದು, ಸಾರ್ವಜನಿಕರು ಇನ್ನೂ ಕೂಡ ತಮ್ಮ ಕೈಲಾದಷ್ಟು ನೆರವನ್ನು ನೀಡುತ್ತಲೇ ಇದ್ದಾರೆ. ಹೀಗಾಗಿ ಇದು ಇನ್ನು ಕೆಲ ಹೊತ್ತಿನಲ್ಲೇ 1.25 ಕೋಟಿ ರೂಪಾಯಿಗಳನ್ನು ತಲುಪಬಹುದು ಎಂದು ಹೇಳಲಾಗಿದೆ. ದೇಶವಾಸಿಗಳು ಮಾತ್ರವಲ್ಲದೆ ವಿದೇಶದಲ್ಲಿರುವವರು ಸಹ ಕನ್ನಯ್ಯ ಲಾಲ್ ಕುಟುಂಬದ ನೆರವಿಗೆ ಮುಂದಾಗಿದ್ದಾರೆ.
ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದಾರೆ ಎಂಬ ಕಾರಣಕ್ಕೆ ಮುಸ್ಲಿಂ ಮೂಲಭೂತವಾದಿಗಳು ಅವರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆಗೈದಿದ್ದರು. ವಿಡಿಯೋದಲ್ಲಿ ಈ ಪೈಶಾಚಿಕ ಕೃತ್ಯ ಕಂಡ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕನ್ನಯ್ಯ ಲಾಲ್ ಕುಟುಂಬದ ಪರಿಸ್ಥಿತಿಗೆ ಮರುಗಿದ್ದರು. ಹೀಗಾಗಿ ಅವರ ನೆರವಿಗೆ ಎಲ್ಲರೂ ಮುಂದಾಗಿದ್ದು, ಕನ್ನಯ್ಯ ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ.