ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಪ್ರತಿಭಟನೆಗಳಲ್ಲಿ ’ಆಜಾದಿ’ ಘೋಷಣೆಗಳ ಮೂಲಕ ದೇಶದ ಗಮನ ಸೆಳೆದ ಬಿಹಾರ ಮೂಲದ ಕನ್ಹಯ್ಯಾ ಕುಮಾರ್, ಎಡರಂಗದ ಸಹವಾಸ ಸಾಕು ಎನಿಸಿ ಕಾಂಗ್ರೆಸ್ ಕಡೆಗೆ ಮುಖ ಮಾಡಿದಂತಿದೆ.
ಈ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಶೀಘ್ರವೇ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪಕ್ಷ ಸೇರ್ಪಡೆ ವಿಚಾರ ಸಂಬಂಧ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಹೊಸ ಮುಖಗಳಿಗೆ, ಯುವ ಪೀಳಿಗೆಗೆ ಆದ್ಯತೆ ನೀಡುವ ಕಡೆಗೆ ಕಾಂಗ್ರೆಸ್ ಕೇಂದ್ರಿತವಾಗಿದೆ. ಈಗಾಗಲೇ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಕೂಡ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಗಾಂಧಿ ಕುಟುಂಬದ ಆಪ್ತ ವಲಯದಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ವರದಿ ಆಗುತ್ತಿದೆ. ಸದ್ಯ, ಕನ್ಹಯ್ಯಾ ಕೂಡ ಸಿಪಿಐ ಸಹವಾಸ ತೊರೆದು ’ಕೈ’ ಹಿಡಿಯುವ ಮಾಹಿತಿ ಲಭ್ಯವಾಗುತ್ತಿದೆ.
‘ದೇಶಭಕ್ತಿಯ ಹೆಸರಲ್ಲಿ ಅಂಧ ಭಕ್ತಿ ಪ್ರದರ್ಶನ ಕೂಡ ದೇಶದ್ರೋಹ’
2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಮತ್ತು ಹಾಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಸಿಪಿಐ ಟಿಕೆಟ್ ಅಡಿಯಲ್ಲಿ ಕನ್ಹಯ್ಯಾ ಸ್ಪರ್ಧಿಸಿದ್ದರು.
ಆದರೆ, ಚುನಾವಣೆಯಲ್ಲಿ ಸೋಲುಂಡ ಬಳಿಕ, ಅವರು ತೆರೆಮರೆಯಲ್ಲಿ ಮಾತ್ರವೇ ಕೆಲವು ಭಾಷಣಗಳು, ಟ್ವಿಟರ್‌ನಲ್ಲಿ ಪ್ರತಿಕ್ರಿಯೆಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ.
ತಮ್ಮ ರಾಜಕೀಯ ಭವಿಷ್ಯ ಕಾಣಲು ಅವರು ಕಾಂಗ್ರೆಸ್ ಸೂಕ್ತ ಮತ್ತು ಅನಿವಾರ್ಯ ಎಂದು ಭಾವಿಸಿದಂತಿದ್ದು, ಕಾಂಗ್ರೆಸ್ ಕೂಡ ಗೆಲ್ಲುವ ಕುದುರೆಗಳನ್ನೇ ಹುಡುಕುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ.