ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಿಪಿಐ ಪಕ್ಷದ ನಾಯಕ ಕನ್ಹಯ್ಯ ಕುಮಾರ್ ಹಾಗೂ ರಾಷ್ಟ್ರೀಯ ದಲಿತ ಅಧಿಕಾರ ಮಂಚ್ನ ಶಾಸಕ ಜಿಗ್ನೇಶ್ ಮೇವಾನಿ ಸೆಪ್ಟೆಂಬರ್ 28ರಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಈ ಇಬ್ಬರು ನಾಯಕರು ಅಕ್ಟೋಬರ್ 2 ಗಾಂಧಿ ಜಯಂತಿ ದಿನದಂದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಇದಕ್ಕೂ ಮುಂಚಿತವಾಗಿ ಅಂದರೆ 114ನೇ ಭಗತ್ ಸಿಂಗ್ ಜಯಂತಿಯಂದು ಜಿಗ್ನೇಶ್ ಹಾಗೂ ಕನ್ಹಯ್ಯ ‘ಕೈ’ ಕೋಟೆಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.
ಜಿಗ್ನೇಶ್ ಮೇವಾನಿ ಗುಜರಾತ್ನ ವಡ್ಗಾಮ್ ಕ್ಷೇತ್ರದ ಶಾಸಕ ಹಾಗೂ ದಲಿತ ನಾಯಕರಾಗಿದ್ದಾರೆ. ಇವರನ್ನು ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ನೇಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾಗಿರುವ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಬಿಹಾರದಲ್ಲಿ ‘ಕೈ’ಗೆ ಬಲ ನೀಡಲು ಶ್ರಮಿಸಲಿದ್ದಾರೆ ಎನ್ನಲಾಗ್ತಿದೆ.
ವರದಿಗಳ ಪ್ರಕಾರ ಕನ್ಹಯ್ಯ ಈಗಾಗಲೇ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಜೊತೆ ಸಾಕಷ್ಟು ಬಾರಿ ಮೀಟಿಂಗ್ ಮಾಡಿದ್ದು ಪಕ್ಷದಲ್ಲಿ ತಮ್ಮ ಸ್ಥಾನದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಬೆಗುಸರಾಯ್ನಿಂದ ಕನ್ಹಯ್ಯ ಕಣಕ್ಕೆ ಇಳಿದಿದ್ದರು. ಆದರೆ ಬಿಜೆಪಿಯ ಗಿರಿರಾಜ್ ಸಿಂಗ್ ಎದುರು ಸೋತಿದ್ದರು.