ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸದಸ್ಯೆಯಾಗಿ ಆಯ್ಕೆಯಾಗಿರುವ ನಟಿ ಕಂಗನಾ ರಣಾವತ್, ಮುಂಬೈನ ಪ್ರತಿಷ್ಠಿತ ಬಡಾವಣೆ ಪಾಲಿ ಹಿಲ್ ನಲ್ಲಿರುವ ತಮ್ಮ ನಿವಾಸವನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಲೋಕಸಭೆಗೆ ಆಯ್ಕೆಯಾದ ಬಳಿಕ ನಟಿ ಕಂಗನಾ ತೆಗೆದುಕೊಂಡಿರುವ ಈ ತೀರ್ಮಾನ ಅಚ್ಚರಿಗೆ ಕಾರಣವಾಗಿದೆ.
ಕಂಗನಾ ಅವರಿಂದ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ ಮುಂಬೈನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಿರ್ವಹಿಸುವ ಯೂಟ್ಯೂಬ್ ಪೇಜ್ ‘ಕೋಡ್ ಎಸ್ಟೇಟ್’ ನಲ್ಲಿ ನಟಿಯ ನಿವಾಸ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ಕಚೇರಿಯ ವಿಡಿಯೋವನ್ನು ಹಾಕಲಾಗಿದೆ. ಕಂಗನಾ ಅವರ ಈ ಪ್ರಾಪರ್ಟಿಗೆ 40 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಬಳಿಕ ಕಂಗನಾ ರಣಾವತ್ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಮಾಚಲ ಪ್ರದೇಶದ ತಮ್ಮ ಸ್ವಕ್ಷೇತ್ರ ಹಾಗೂ ನವದೆಹಲಿಯಲ್ಲಿ ಹೆಚ್ಚಿನ ಸಮಯ ಕಳೆಯಲು ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ಮುಂಬೈ ನಿವಾಸವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇಂಟರೆಸ್ಟಿಂಗ್ ಸಂಗತಿ ಎಂದರೆ ಕಂಗನಾ ರಣಾವತ್ ಅವರ ಈ ನಿವಾಸದ ಒಂದು ಭಾಗವನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ಮುಂಬೈ ಮಹಾನಗರ ಪಾಲಿಕೆ ಅದನ್ನು ತೆರವುಗೊಳಿಸಲು ಮುಂದಾಗಿತ್ತು. ಕಾರ್ಯಾಚರಣೆ ನಡೆದಿರುವಾಗಲೇ ಕಂಗನಾ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆ ಬಳಿಕ ತಮಗೆ ಎರಡು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಮುಂಬೈ ಮಹಾನಗರ ಪಾಲಿಕೆ ವಿರುದ್ಧ ಕಂಗನಾ ಮೊಕದ್ದಮೆ ಹೂಡಿದ್ದರು ಸಹ ಬಳಿಕ ಹಿಂಪಡೆದಿದ್ದರು.