ನವದೆಹಲಿ: ಟ್ವಿಟರ್ ಮಾಲೀಕತ್ವ ವಹಿಸಿದ ಬಳಿಕ ಟ್ವಿಟರ್ನಲ್ಲಿ ಬ್ಲೂ ಟಿಕ್ ಪರಿಶೀಲನೆ ಸೇವೆಗೆ 8 ಡಾಲರ್ ವಿಧಿಸುವ ಕುರಿತು ಘೋಷಣೆ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್ ಇದೀಗ ಈ ಪ್ರಕ್ರಿಯೆಗೆ ಐಒಸ್ ಮೂಲಕ ಚಾಲನೆ ನೀಡಿದ್ದಾರೆ. ಇದು ಭಾರತದಲ್ಲಿ ಇನ್ನೊಂದು ತಿಂಗಳಿನಲ್ಲಿ ಜಾರಿಯಾಗಲಿದ್ದು ಈ ಬಗ್ಗೆ ನಟಿ ಕಂಗನಾ ರಣಾವತ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‍ಗಳಲ್ಲಿ ಈ ಸೇವೆ ಲಭ್ಯವಿರಲಿದೆ. IOS ಆಪರೇಟಿಂಗ್ ಸಿಸ್ಟಮ್‍ಗಳಲ್ಲಿ ಮಾತ್ರ ಇದು ಕಾರ್ಯ ನಿರ್ವಹಿಸಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಟ್ವಿಟರ್, ‘ಇಂದಿನಿಂದ ನಾವು ಟ್ವಿಟರ್ ಬ್ಲೂ ಟಿಕ್‍ಗೆ ಹೊಸ ಫೀಚರ್‍ಗಳನ್ನು ಸೇರಿಸುತ್ತಿದ್ದೇವೆ. ಶೀಘ್ರವೇ ಬಳಕೆದಾರರಿಗೆ ಹೊಸ ಮತ್ತು ಹೆಚ್ಚಿನ ಫೀಚರ್‍ಗಳನ್ನು ಪಡೆಯಲಿದ್ದಾರೆ. ಸದ್ಯಕ್ಕೆ ನೀವು ಸೈನ್‍ಅಪ್ ಮಾಡಿದರೆ ತಿಂಗಳಿಗೆ 7.99 ಡಾಲರ್ ನೀಡಿ ಟ್ವಿಟರ್ ಬ್ಲೂ ಟಿಕ್ ಪಡೆಯಬಹುದು’ ಎಂದು ಹೇಳಿದ್ದು, ಭಾರತದಲ್ಲಿಯೂ ಇದನ್ನು ಒಂದು ತಿಂಗಳಿನಲ್ಲಿ ಜಾರಿಗೆ ತರುವುದಾಗಿ ಹೇಳಿದ್ದಾರೆ.
ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ಕಂಗನಾ ರಣಾವತ್, “ಟ್ವಿಟರ್ ಖಾತೆಯನ್ನು ನಿರ್ವಹಿಸಲು ನಿರ್ದಿಷ್ಟ ಮೊತ್ತವನ್ನು ಪಾವತಿಸುವುದು ಅದರ ಸಮಗ್ರತೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ, ಈ ಜಗತ್ತಿನಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ” ಎಂದಿದ್ದಾರೆ.
ಉಚಿತವಾಗಿ ನೀಡುವ ಇಂಥ ಪ್ಲಾಟ್‌ಫಾರ್ಮ್‌ಗಳು ತಮ್ಮನ್ನು ತಾವು ಹೇಗೆ ಉಳಿಸಿಕೊಳ್ಳುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಡೇಟಾವನ್ನು ಮಾರಾಟ ಮಾಡಿ, ಅವರು ನಿಮ್ಮನ್ನು ಅವರ ಭಾಗವಾಗಿಸುತ್ತಾರೆ, ನಿಮ್ಮ ಮೇಲೆ ಪ್ರಭಾವ ಬೀರುತ್ತಾರೆ ಮತ್ತು ನಂತರ ನಿಮ್ಮನ್ನು (ನಿಮ್ಮ ಧ್ವನಿ / ಪ್ರಜ್ಞೆ) ದಿನದ ಪ್ರತಿ ನಿಮಿಷವೂ ಮಾರಾಟ ಮಾಡುತ್ತಾರೆ, ಇಷ್ಟೆಲ್ಲಾ ಸೇವೆ ಸಲ್ಲಿಸುವ ಸಮಯದಲ್ಲಿ ಉಚಿತವಾಗಿ ಎಲ್ಲವನ್ನೂ ನೀಡಬೇಕು ಎಂದು ಯೋಚಿಸುವುದು ತರವಲ್ಲ ಎಂದಿದ್ದಾರೆ.