alex Certify ಜಾವೇದ್ ಅಖ್ತರ್‌ ಜೊತೆಗಿನ ಕಾನೂನು ವಿವಾದ ಬಗೆಹರಿಸಿಕೊಂಡ ಕಂಗನಾ; ಫೋಟೋ ಶೇರ್‌ ಮಾಡಿ ಮಾಹಿತಿ ನೀಡಿದ ನಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾವೇದ್ ಅಖ್ತರ್‌ ಜೊತೆಗಿನ ಕಾನೂನು ವಿವಾದ ಬಗೆಹರಿಸಿಕೊಂಡ ಕಂಗನಾ; ಫೋಟೋ ಶೇರ್‌ ಮಾಡಿ ಮಾಹಿತಿ ನೀಡಿದ ನಟಿ…!

ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್‌ ತಮ್ಮ ವಿರುದ್ದ ಹಿರಿಯ ಚಿತ್ರಕಥೆಗಾರ ಜಾವೇದ್ ಅಖ್ತರ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ದೀರ್ಘಕಾಲದ ಕಾನೂನು ವಿವಾದವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ. ಕಂಗನಾ, ಅಖ್ತರ್ ಜೊತೆಗಿನ ತಮ್ಮ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಈ ಬೆಳವಣಿಗೆಯನ್ನು ಘೋಷಿಸಿದ್ದಾರೆ. ಈ ಫೋಟೋವನ್ನು ಶುಕ್ರವಾರ ಮುಂಬೈನ ಬಾಂದ್ರಾದಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತೆಗೆದುಕೊಳ್ಳಲಾಗಿದ್ದು, ಅಲ್ಲಿ ಇಬ್ಬರೂ ತಮ್ಮ ನಡುವಿನ ಐದು ವರ್ಷಗಳ ಕಾಲದ ವಿವಾದವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.

“ಇಂದು, ಜಾವೇದ್ ಜಿ ಮತ್ತು ನಾನು ನಮ್ಮ ಕಾನೂನು ವಿಷಯವನ್ನು (ಮಾನನಷ್ಟ ಪ್ರಕರಣ) ಮಧ್ಯಸ್ಥಿಕೆಯ ಮೂಲಕ ಬಗೆಹರಿಸಿಕೊಂಡಿದ್ದೇವೆ. ಮಧ್ಯಸ್ಥಿಕೆಯಲ್ಲಿ, ಜಾವೇದ್ ಜಿ ದಯೆ ತೋರಿಸಿದ್ದಾರೆ. ಅವರು ನನ್ನ ಮುಂದಿನ ಚಿತ್ರಕ್ಕೆ ಹಾಡುಗಳನ್ನು ಬರೆಯಲು ಸಹ ಒಪ್ಪಿಕೊಂಡರು” ಎಂದು ಕಂಗನಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅಖ್ತರ್ ಮತ್ತು ಕಂಗನಾ ರಣಾವತ್ ಶುಕ್ರವಾರ ಬೆಳಿಗ್ಗೆ 10:30 ರ ಸುಮಾರಿಗೆ ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆಗಮಿಸಿದ್ದು, ಮ್ಯಾಜಿಸ್ಟ್ರೇಟ್ ಆಶಿಶ್ ಅವರ ಕೊಠಡಿಗೆ ತಮ್ಮ ತಮ್ಮ ವಕೀಲರಾದ ಜಯ್ ಕೆ. ಭಾರದ್ವಾಜ್ ಮತ್ತು ರಿಜ್ವಾನ್ ಸಿದ್ದಿಕಿ ಜೊತೆಗೆ ಹೋಗಿದ್ದರು.

ಕಂಗನಾ, ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ವಿರುದ್ಧ ಮಾನನಷ್ಟಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಜಾವೇದ್‌ ಅಖ್ತರ್ 2020 ರಲ್ಲಿ ದೂರು ದಾಖಲಿಸಿದ ನಂತರ ಅವರ ಕಾನೂನು ಹೋರಾಟ ಪ್ರಾರಂಭವಾಗಿತ್ತು.

2016 ರಲ್ಲಿ, ಕಂಗನಾ ಮತ್ತು ನಟ ಹೃತಿಕ್ ರೋಷನ್ ನಡುವೆ ಸಾರ್ವಜನಿಕವಾಗಿ ವಾಗ್ವಾದ ನಡೆದಿದ್ದು, ರೋಷನ್ ಕುಟುಂಬಕ್ಕೆ ಆಪ್ತರಾದ ಜಾವೇದ್ ಅಖ್ತರ್, ಕಂಗನಾ ರಣಾವತ್ ಹೃತಿಕ್ ರೋಷನ್ ಅವರ ಕ್ಷಮೆಯಾಚಿಸುವಂತೆ ಕೇಳಿದ್ದರು ಎನ್ನಲಾಗಿದೆ.

ಕಂಗನಾ ಮಾಧ್ಯಮ ಸಂದರ್ಶನದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ತಮ್ಮ ಹೆಸರನ್ನು ಎಳೆದು ತರುವ ಮೂಲಕ ನನ್ನ ‘ಖ್ಯಾತಿ’ಗೆ ಧಕ್ಕೆ ತಂದಿದ್ದಾರೆ ಮತ್ತು ಮಾನ ಹಾನಿ ಮಾಡಿದ್ದಾರೆ ಎಂದು ಅಖ್ತರ್ ಹೇಳಿಕೊಂಡಿದ್ದರು.

2021 ರಲ್ಲಿ, ಕ್ರಿಮಿನಲ್ ಬೆದರಿಕೆ ಮತ್ತು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅಖ್ತರ್ ವಿರುದ್ಧ ಪ್ರತಿ-ದೂರು ದಾಖಲಿಸುವ ಮೂಲಕ ಕಂಗನಾ ಪ್ರತಿವಾದ ಮಂಡಿಸಿದ್ದರು.

2016 ರಲ್ಲಿ ಅಖ್ತರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದಾಗ, ಅವರು ಸಹನಟರೊಬ್ಬರಿಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಕ್ರಿಮಿನಲ್ ರೀತಿಯಲ್ಲಿ ತಮ್ಮನ್ನು ಬೆದರಿಸಿದರು ಎಂದು ಕಂಗನಾ ಹೇಳಿಕೊಂಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...