ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಅಂಗೀಕರಿಸಿದ ಚಲನಚಿತ್ರವನ್ನು ನಿಷೇಧಿಸುವುದು ಸಂವಿಧಾನವನ್ನು ಅವಮಾನಿಸಿದಂತಿದೆ ಎಂದು ನಟಿ ಕಂಗನಾ ರಣಾವತ್ ವಿವಾದಿತ ಚಿತ್ರ ʼದಿ ಕೇರಳ ಸ್ಟೋರಿʼ ಪರ ಬ್ಯಾಟ್ ಬೀಸಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿರುವ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡ ನಟಿ, ಕೆಲವು ರಾಜ್ಯಗಳು ಚಿತ್ರವನ್ನು ನಿಷೇಧಿಸಿದ್ದು ಸರಿಯಲ್ಲ. ಸರ್ಕಾರಿ ಸಂಸ್ಥೆಯಾದ ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಅನುಮೋದನೆ ಸಿಕ್ಕಿದ ನಂತರ ಅದನ್ನು ವಿರೋಧಿಸಬಾರದು ಎಂದರು.
ಇಂತಹ ಚಿತ್ರ ನಿರ್ಮಾಣವಾದಾಗ ಜನರ ದೂರು ನಿವಾರಣೆಯಾಗುತ್ತದೆ. ಇವು ಚಿತ್ರರಂಗಕ್ಕೆ ಸಹಾಯ ಮಾಡುತ್ತವೆ. ಜನರು ಇಷ್ಟಪಟ್ಟು ನೋಡಿ ಮೆಚ್ಚುವ ಚಿತ್ರಗಳು ಚಿತ್ರರಂಗಕ್ಕೆ ಲಾಭ ತಂದುಕೊಡುತ್ತವೆ. ಅವರು ವೀಕ್ಷಿಸಲು ಬಯಸುವಂತಹ ಚಲನಚಿತ್ರಗಳನ್ನು ನಿರ್ಮಾಣ ಮಾಡುವುದಿಲ್ಲವೆಂದು ಬಾಲಿವುಡ್ ಚಲನಚಿತ್ರೋದ್ಯಮವನ್ನು ದೂರುತ್ತಾರೆ. ಆದರೆ ಒಮ್ಮೆ ಇಂತಹ ಚಿತ್ರಗಳನ್ನು ನಿರ್ಮಿಸಿದಾಗ ಅವು ಸಾಮೂಹಿಕ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತವೆ ಎಂದಿದ್ದಾರೆ.
ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಕೇರಳದ ಮಹಿಳೆಯರನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ ಮತ್ತು ಭಯೋತ್ಪಾದಕ ಗುಂಪು ಐಸಿಸ್‌ಗೆ ಸೇರಿಸಲಾಗಿದೆ ಎಂದು ಹೇಳಿ ಸುದ್ದಿ ಮಾಡಿದೆ. ಚಿತ್ರವನ್ನ ಪಶ್ಚಿಮ ಬಂಗಾಳದ ಆಡಳಿತವು ನಿಷೇಧಿಸಿದರೆ, ಕಾನೂನು ಮತ್ತು ಸುವ್ಯವಸ್ಥೆ ಕಾರಣದಿಂದ ತಮಿಳುನಾಡು ಸರ್ಕಾರ ಪ್ರದರ್ಶನ ಸ್ಥಗಿತಗೊಳಿಸಿತ್ತು. ಆದರೆ ಮೇ 18 ರಂದು ರಾಜ್ಯದಲ್ಲಿ ಚಲನಚಿತ್ರ ಪ್ರದರ್ಶನವನ್ನು ನಿಷೇಧಿಸುವ ಪಶ್ಚಿಮ ಬಂಗಾಳ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಸ್ಥಗಿತಗೊಳಿಸಿತ್ತು ಮತ್ತು ವೀಕ್ಷಕರ ಸುರಕ್ಷತೆಯನ್ನು ಕಾಪಾಡಲು ತಮಿಳುನಾಡಿಗೆ ನಿರ್ದೇಶಿಸಿತ್ತು. ವಿವಾದದ ನಡುವೆಯೂ ದಿ ಕೇರಳ ಸ್ಟೋರಿ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.