
ರಾಮನಗರ: ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ 15 ತಿಂಗಳ ಬಾಕಿ ವೇತನಕ್ಕಾಗಿ ಪೌರಕಾರ್ಮಿಕರಿಬ್ಬರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಘಟನೆ ನಡೆದ ಒಂದು ಗಂಟೆ ಅವಧಿಯಲ್ಲಿ ಇಬ್ಬರ ವೇತನವನ್ನು ನೀಡಲಾಗಿದೆ. ಗ್ರಾಮ ಪಂಚಾಯಿತಿ ಸ್ವಚ್ಛತಾ ಕೆಲಸಗಾರರಾಗಿರುವ ಎನ್. ಸುರೇಶ್ ಮತ್ತು ವಿ. ರಂಗಯ್ಯ ಪ್ರತಿಭಟನೆ ನಡೆಸಿದ ಪೌರಕಾರ್ಮಿಕರಾಗಿದ್ದಾರೆ. 2020 ರಿಂದ ಕೆಲಸ ಮಾಡುತ್ತಿದ್ದ ಅವರಿಗೆ ಒಂದೂವರೆ ವರ್ಷದ ಹಿಂದಿನ ಬಾಕಿ ವೇತನ ನೀಡಬೇಕಿತ್ತು. ವೇತನಕ್ಕಾಗಿ ಪಂಚಾಯ್ತಿ ಅಧಿಕಾರಿಗಳನ್ನು ಕೇಳಿ ಬೇಸತ್ತ ಕಾರ್ಮಿಕರು ಇಂದು ಮಧ್ಯಾಹ್ನ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಇಬ್ಬರ ವೇತನ ನೀಡಿದ್ದಾರೆ. ಇಬ್ಬರಿಗೆ ತಲಾ 1.10 ಲಕ್ಷ ಚೆಕ್, 50,000 ರೂ. ನಗದು ನೀಡಲಾಗಿದೆ. ನನ್ನ ಅವಧಿಯಲ್ಲಿ ವೇತನ ಬಾಕಿ ಇರಲಿಲ್ಲ ಎಂದು ಪಿಡಿಒ ಶ್ರೀನಿವಾಸ್ ತಿಳಿಸಿದ್ದು, ಈ ಹಿಂದೆ ಇದ್ದ ಅಧಿಕಾರಿಗಳು ವೇತನ ಬಾಕಿ ಉಳಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಇನ್ನು ಮುಂದೆ ಪ್ರತಿ ತಿಂಗಳು ವೇತನ ಪಾವತಿಸುವಂತೆ ಪೌರಕಾರ್ಮಿಕರು ಒತ್ತಾಯಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರಲ್ಲೇ ಈ ಘಟನೆ ನಡೆದಿದೆ.