ಮಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಧ್ಯೇಯ ವಾಕ್ಯದೊಂದಿಗೆ ನವೆಂಬರ್ ನಲ್ಲಿ ಕಂಬಳ ನಡೆಸಲಾಗುವುದು.
ಪುತ್ತೂರು ಶಾಸಕ ಮತ್ತು ಉಪ್ಪಿನಂಗಡಿ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಕಂಬಳ ಸಮಿತಿ ವತಿಯಿಂದ ರೋಹಿರ್ ಹೆಗ್ಡೆ ಎರ್ಮಾಳು ಅಧ್ಯಕ್ಷತೆಯಲ್ಲಿ ಭಾನುವಾರ ಮೂಡಬಿದರೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕಂಬಳದಲ್ಲಿ ಭಾಗವಹಿಸುವವರಿಗೆ ಆನ್ಲೈನ್ ಮೂಲಕ ಪಾಸ್ ನೀಡಲಾಗುವುದು. ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಕಂಬಳ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ತುಳು ನಾಡಿನ ಸಂಸ್ಕೃತಿ ಪಾರಂಪರಿಕ ತಿನಿಸುಗಳ ಪ್ರದರ್ಶನ ಕೂಡ ಕಂಬಳ ಉತ್ಸವದಲ್ಲಿ ಇರಲಿದೆ. ಕಂಬಳಕೋಣಗಳನ್ನು ಬೆಂಗಳೂರಿಗೆ ಕರೆತರುವ ಲಾರಿ ಬಾಡಿಗೆ ನೀಡಲಿದ್ದು, ಕಂಬಳ ಕ್ಷೇತ್ರದ 20 ಸಾವಿರಕ್ಕೂ ಅಧಿಕ ಮಂದಿ ಸಮವಸ್ತ್ರದಲ್ಲಿ ಭಾಗವಹಿಸಲಿದ್ದಾರೆ. ಕೆಲವು ಸಚಿವರು ಪೂರಕವಾದ ಪ್ರಾಯೋಜಕತ್ವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದು, ಕಂಬಳ ಯಜಮಾನರ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕಂಬಳಗಳಿಗೆ ಸರ್ಕಾರ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಿದೆ. ಬೆಂಗಳೂರಿನಲ್ಲಿ ತುಳು ಭವನ ನಿರ್ಮಾಣ ಸಹಿತ ತುಳು ಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನ ಸೆಳೆಯುವುದಾಗಿ ಹೇಳಿದ್ದಾರೆ.