ಚೆನ್ನೈ: ನಟ, ರಾಜಕಾರಣಿ ಕಮಲ್ ಹಾಸನ್ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದು, ಹೊಸ ಸಂಸತ್ ಭವನದ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರ ಆರಂಭಿಸಿರುವ ನಟ ಕಮಲ್ ಹಾಸನ್, ನೂತನ ಸಂಸತ್ ಭವನದ ಕಟ್ಟಡಕ್ಕೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿಯವರಿಗೆ ದೇಶ ಆರ್ಥಿಕ ಸಂಕಷ್ಟದಲ್ಲಿರುವಾಗ ಹೊಸ ಸಂಸತ್ ಭವನದ ನಿರ್ಮಾಣ ಬೇಕೇ? ಎಂದು ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.
ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ, ಕೆಲಸ ಕಳೆದುಕೊಂಡಿದ್ದಾರೆ. ದೇಶದ ಅರ್ಧದಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಆರ್ಥಿಕ ಸಂಕಷ್ಟ ಎದುರಾಗಿದೆ. ಇಂಥಹ ಸಂದರ್ಭದಲ್ಲಿ 1000 ಕೋಟಿ ರೂ. ಸಂಸತ್ ಭವನದ ನಿರ್ಮಾಣ ನಿರ್ಧಾರ ಸರಿಯೇ? ಗ್ರೇಟ್ ವಾಲ್ ಆಫ್ ಚೈನಾ ನಿರ್ಮಾಣ ಮಾಡುವಾಗ ಸಾವಿರಾರು ಜನ ಸಾವನ್ನಪ್ಪಿದ್ದರು. ಆದರೆ ಆಡಳಿತಗಾರರು ಜನರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಚೀನಾದ ಮಹಾಗೋಡೆ ನಿರ್ಮಾಣ ಮಾಡುತ್ತಿರುವುದಾಗಿ ಸಮರ್ಥಿಸಿಕೊಂಡಿದ್ದರು. ಹಾಗೇ ನೀವು ಯಾರನ್ನು ರಕ್ಷಿಸಲು ಸಾವಿರ ಕೋಟಿ ರೂ. ವೆಚ್ಚದಲ್ಲಿ.ನೂತನ ಸಂಸತ್ ಭವನ ನಿರ್ಮಾಣ ಮಾಡುತ್ತಿದ್ದೀರಿ ಎಂಬುದನ್ನು ದಯವಿಟ್ಟು ಉತ್ತರಿಸಿ ಎಂದು ಹೇಳಿದ್ದಾರೆ.