ಕಲಬುರಗಿ : ಕಲ್ಯಾಣ ಕರ್ನಾಟಕ ಉತ್ಸವ ಮತ್ತು 371ಜೆ ಕಾಯ್ದೆ ಬಂದು 10 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಬಾರಿಯ ಕಲ್ಯಾಣ ಕರ್ನಾಟಕ ಉತ್ಸವ 3 ದಿನಗಳ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
ಮಂಗಳವಾರ ತಮ್ಮ ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆಯಲ್ಲಿ ಉತ್ಸವ ವರ್ಷರಂಜಿತವಾಗುವಂತೆ ಸಂಘಟಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸೆ.15 ರಿಂದ 17ರ ವರೆಗೆ ಮೂರು ದಿನಗಳ ಕಾಲ ಪ್ಲಾಗಥಾನ್, ರಂಗಾಯಣದಿಂದ ನಾಟಕ,ಚಿತ್ರ ಸಂತೆ, ಆಹಾರ ಮೇಳ, ಸ್ಟ್ರೀಟ್ ಪ್ಲೇ, ವಸ್ತು ಪ್ರದರ್ಶನ, ಕಲ್ಯಾಣ ಭಾಗದ ಕಲಾವಿದರು ಒಳಗೊಂಡಂತೆ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಸಂಜೆ ಹಾಗೂ ಕಲಾ ತಂಡಗಳ ಮೆರವಣಿಗೆ ಅಯೋಜಿಸಲು ಚರ್ಚಿಸಲಾಯಿತು. ಸೆ.17 ರಂದು ಮುಖ್ಯಮಂತ್ರಿಗಳಿಂದ ದ್ಚಜಾರೋಹಣ, ಹೈ.ಕ. ವಿಮೋಚನೆ ಹೋರಾಟಗಾರರಿಗೆ ಸನ್ಮಾನ ಹಾಗೂ ಮಂಡಳಿಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದರು.
371ಜೆ ಕಾಯ್ದೆ ಜಾರಿಗೆ ಬಂದು 10 ವರ್ಷವಾಗಿವೆ. ಈ ಅವಧಿಯಲ್ಲಿ ಮಂಡಳಿಯಿಂದ ಪ್ರದೇಶದಲ್ಲಾದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಬಿಂಬಿಸುವಂತ ಕಾರ್ಯಕ್ರಮ ಆಯೋಜಿಸಬೇಕು. ಮೀಸಲಾತಿಯಿಂದ ನೌಕರಿ, ಉನ್ನತ ಶಿಕ್ಷಣ ಪಡೆದವರ ಅಭಿಪ್ರಾಯ ಮತ್ತು 10 ವರ್ಷದಲ್ಲಿನ ಸಾಧನೆ ಬಿಂಬಿಸುವ ಛಾಯಾಚಿತ್ರ ಪ್ರದರ್ಶನ, ಕಿರು ಹೊತ್ತಿಗೆ ಮುದ್ರಣ ಹೊರತರಲು ಸಹ ನಿರ್ಧರಿಸಿದೆ ಎಂದರು.