ಬೆಂಗಳೂರು: ಕಲ್ಯಾಣ ಕರ್ನಾಟಕದ ಮೀಸಲಾತಿ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಸರ್ಕಾರ ಸೂಚನೆ ನೀಡಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೇರ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿ ಅನ್ವಯ ನೇಮಕಾತಿ ಪ್ರತ್ಯೇಕ ಅಧಿಸೂಚನೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವಂತೆ ತಿಳಿಸಲಾಗಿದೆ.
ಸರ್ಕಾರದಿಂದ 2020ರ ಜೂನ್ ನಲ್ಲಿ ಹೊರಡಿಸಲಾಗಿದ್ದ ಆದೇಶದಲ್ಲಿ ಸ್ಥಳೀಯ ಮತ್ತು ಮಿಕ್ಕುಳಿದ ವೃಂದಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಎರಡೂ ವೃಂದಗಳ ಹುದ್ದೆಗಳಿಗೆ ಒಂದೇ ಅಧಿಸೂಚನೆ ಹೊರಡಿಸಲು ತಿಳಿಸಲಾಗಿತ್ತು. ಒಂದೇ ಅರ್ಜಿಯಲ್ಲಿ ಮೀಸಲಾತಿ ಅನ್ವಯ ಹುದ್ದೆಗಳ ವರ್ಗೀಕರಣ ನಡೆಸಿ ಪ್ರತ್ಯೇಕ ಮೀಸಲಾತಿ ಬಯಸುವವರು ತಮ್ಮ ಇಚ್ಛೆ ತಿಳಿಸಲು ಅವಕಾಶ ನೀಡಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿತ್ತು.
ಈ ಕುರಿತಂತೆ ಸರ್ಕಾರದಿಂದ ಪರಿಷ್ಕೃತ ಆದೇಶ ಹೊರಡಿಸಲಾಗಿದ್ದು, ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಒಂದೇ ಅರ್ಜಿ ಇರುತ್ತದೆ. ಉಳಿದ ಎಲ್ಲಾ ಹುದ್ದೆಗಳ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿಯನ್ವಯ ನೇಮಕಾತಿಗೆ ಅಧಿಸೂಚನೆ, ಸ್ಪರ್ಧಾತ್ಮಕ ಪರೀಕ್ಷೆ, ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಹೇಳಲಾಗಿದ್ದು, ಪ್ರಸ್ತುತ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿರುವ ಪ್ರಕರಣಗಳಿಗೆ ಹಿಂದಿನ ಆದೇಶ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.