ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಣಮಳೆಯಿಂದಾಗಿ ಜನರ ಬದುಕು ದುಸ್ತರವಾಗಿದೆ. ಹಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಗಳ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಷ್ಟಾಗ್ಯೂ ರಾಜ್ಯ ಕಾಂಗ್ರೆಸ್ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ನಿದ್ದೆಯಿಂದ ಎಚ್ಚೆತ್ತಿಲ್ಲ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಭೀಕರ ಮಳೆಯಿಂದ ಕಲ್ಯಾಣ ಕರ್ನಾಟಕ ಅಕ್ಷರಶಃ ಮುಳುಗಿದೆ. ಕಲ್ಬುರ್ಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಜನರ ಸಂಕಷ್ಟಗಳನ್ನು ನಿವಾರಿಸಬೇಕಾದ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿ ಗಡದ್ದಾಗಿ ನಿದ್ದೆ ಹೊಡೆಯುತ್ತಿದೆ ಎಂದು ಕಿಡಿಕಾರಿದೆ.
ಸಿಎಂ ಸಿದ್ದರಾಮಯ್ಯ ಅವರೆ, ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೆ, ಕಲ್ಯಾಣ ಕರ್ನಾಟಕದ ಜನ ಅನುಭವಿಸುತ್ತಿರುವ ಕಷ್ಟಗಳು ನಿಮಗೆ ಕಾಣಿಸುತ್ತಿಲ್ಲವೇ..?ಎಂದು ಪ್ರಶ್ನಿಸಿದೆ.