alex Certify BREAKING : ‘ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ’ : ಹೀಗಿದೆ ‘CM ಸಿದ್ದರಾಮಯ್ಯ’ ಭಾಷಣದ ಹೈಲೆಟ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ’ : ಹೀಗಿದೆ ‘CM ಸಿದ್ದರಾಮಯ್ಯ’ ಭಾಷಣದ ಹೈಲೆಟ್ಸ್..!

ಬೆಂಗಳೂರು : ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ( 371J ) ದೊರೆತು ಒಂದು ದಶಕ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಆಯೋಜಿಸಿರುವ “ಕಲ್ಯಾಣ ಕರ್ನಾಟಕ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

1. ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ವಿಧಿ ಜಾರಿಯ ದಶಮಾನೋತ್ಸವದ ಈ ಮಹತ್ವದ ಸಂದರ್ಭದಲ್ಲಿ ಸಮಸ್ತ ಜನತೆಗೆ ಹೃತೂರ್ವಕ ಶುಭಾಶಯಗಳು.

2. ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಈ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಅವಕಾಶ ಲಭಿಸಿದ್ದು ಧನ್ಯತೆಯ ಭಾವ ಮೂಡಿಸಿದೆ. ಹಾಗೂ ಈ ಭಾಗದ ಅಭಿವೃದ್ಧಿಯ ಸಂಕಲ್ಪವನ್ನು ಇನ್ನಷ್ಟು ಬಲಪಡಿಸಿದೆ.

3. ಈ ವರ್ಷ ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ರೈತರಲ್ಲೂ ಸಂತಸದ ಭಾವನೆ ನೆಲೆಸಿದೆ. ಪ್ರಕೃತಿ ಕೂಡ ನಮ್ಮನ್ನು ಆಶೀರ್ವದಿಸಿದೆ.

4. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದ ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸ್ವಾತಂತ್ರ್ಯದ ಬೆಳಕು ಬಂದಿದ್ದು ಒಂದು ವರ್ಷದ ನಂತರ.

5. ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿ ಹಾಗೂ ಸರ್ದಾರ್ ವಲ್ಲಭ ಭಾಯಿ ಪಟೇಲರ ಸಂಕಲ್ಪಶಕ್ತಿ, ಜವಾಹರ್ ಲಾಲ್ ನೆಹರು ಅವರ ದೂರದೃಷ್ಟಿಯ ಫಲವಾಗಿ ಕಲ್ಯಾಣ ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಹಾಗಾಗಿ ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಹೋರಾಡಿದ ಎಲ್ಲ ಮಹನೀಯರನ್ನು ನಾನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ ಈ ಪ್ರದೇಶ ವಿಶ್ವವೇ ನಿಬ್ಬೆರಗಾಗುವಂತಹ ಸಾಮಾಜಿಕ ಕ್ರಾಂತಿಗೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮಾದರಿ ಆಡಳಿತಕ್ಕೆ ಭದ್ರ ಬುನಾದಿ ಹಾಕಿದ ಪವಿತ್ರ ಭೂಮಿಯಾಗಿದೆ. ಶರಣರ ಚಳುವಳಿಗೆ ಬಸವಣ್ಣನವರು ಮುಂದಾಳತ್ವ ವಹಿಸಿದ್ದರು. ಬಸವ ತತ್ವದಲ್ಲಿ ನಂಬಿಕೆ ಇಟ್ಟು ಮನ್ನಡೆಯುತ್ತಿರುವ ನಮ್ಮ ಸರ್ಕಾರ “ವಿಶ್ವಗುರು ಬಸವಣ್ಣ ಸಾಂಸ್ಕೃತಿ ನಾಯಕರು” ಎಂದು ಘೋಷಿಸಿದೆ. ಕಲ್ಯಾಣ ಚಾಲುಕ್ಯರು, ಬಹಮನಿ ಸುಲ್ತಾನರು, ರಾಷ್ಟ್ರಕೂಟರ ಆಳ್ವಿಕೆಯ ಭವ್ಯ ಪರಂಪರೆ ಹೊಂದಿದ ಪ್ರದೇಶ ಇದಾಗಿದೆ.

7. ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ “ಕವಿರಾಜ ಮಾರ್ಗ” ನೀಡಿದ ಅಮೋಘವರ್ಷ ನೃಪತುಂಗನ ನಾಡು ಇದಾಗಿದೆ. ಸೂಫಿ-ಸಂತರ ಈ ಬೀಡು, ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ.

8. ದೇಶದ ವಿವಿಧ ಪ್ರಾಂತ್ಯಗಳು ಜಾತಿ-ಲಿಂಗ ಅಸಮಾನತೆ, ಊಳಿಗಮಾನ್ಯತೆ ಮುಂತಾದ ಸಮಸ್ಯೆಗಳಲ್ಲಿ ಮುಳುಗಿದ್ದಾಗ ಕಲ್ಯಾಣ ಕರ್ನಾಟಕವು ದೀಪ ಹಚ್ಚಿ ದಾರಿ ತೋರುವ ಕೈಮರದಂತೆ ಕೆಲಸ ಮಾಡಿದೆ. ಒಂದು ಕಾಲಕ್ಕೆ ಬೌದ್ಧ ಧರ್ಮವನ್ನು ಪೋಷಿಸಿದ್ದ ಈ ನೆಲ 12 ನೇ ಶತಮಾನದ ಹೊತ್ತಿಗೆ ಇಡೀ ಜಗತ್ತಿನಲ್ಲಿಯೆ ಅಭೂತ ಪೂರ್ವವಾದ ಪ್ರಜಾಪ್ರಭುತ್ವದ ಆಶಯಗಳನ್ನು ಹುಟ್ಟು ಹಾಕಿತು. ಈ ಭಾಗವು ಹಲವು ಧರ್ಮಗಳ ನೆಲೆವೀಡಾಗಿದೆ. ಎಲ್ಲ ಧರ್ಮಗಳು ಸಾಮರಸ್ಯದಿಂದ ಒಟ್ಟುಗೂಡಿ ಬದುಕುವ ಮೂಲಕ ಇಡೀ ದೇಶಕ್ಕೆ ನಾವು ಮಾದರಿ ಎಂದು ಕಲ್ಯಾಣ ಕರ್ನಾಟಕದ ಜನ ಸಾರಿ ಹೇಳುತ್ತಿದ್ದಾರೆ. ಹಾಗಾಗಿ ಈ ಭಾಗದ ಜನ ನಮಗೆ ಸದಾ ಮಾದರಿ.

9. ಬಸವ ಕಲ್ಯಾಣದಲ್ಲಿ ಹೊತ್ತಿಕೊಂಡ ಶರಣರ ಚಳುವಳಿಯು ಇಡೀ ಉಪಖಂಡದ ಬೇರೆ ಬೇರೆ ಭಾಗಗಳಿಂದ ಸಮಾನತಾವಾದಿ ಆಶಯಗಳನ್ನು ಹೊಂದಿದ್ದ ಜನರನ್ನು ಒಟ್ಟುಗೂಡಿಸಿತು. ಜಾತಿ, ವರ್ಗ, ವರ್ಣ, ಲಿಂಗ ತಾರತಮ್ಯವಿಲ್ಲದ ಸಮ-ಸಮಾಜ ನಿರ್ಮಾಣದ ಆಶಯವನ್ನು ತಾತ್ಕಾಲಿಕವಾಗಿಯಾದರೂ ಈಡೇರಿಸಿತ್ತು. ಶರಣರ ವಚನಚಳುವಳಿಯು ಇವತ್ತಿಗೂ ಕೂಡ ಸಮಾನತಾವಾದಿ ಆಶಯಗಳನ್ನು ಹೊತ್ತ ಜನರಿಗೆ ಪ್ರೇರಣೆಯಾಗಿದೆ.
10. ಆ ನಂತರ ಬ್ರಿಟೀಷರ ವಿರುದ್ಧ ಸೆಟೆದೆದ್ದು ನಿಂತ ಸುರಪುರದ ರಾಜಾ ವೆಂಕಟಪ್ಪ ನಾಯಕ ಮುಂತಾದವರು ಇತಿಹಾಸದಲ್ಲಿ ಶಾಶ್ವತವಾಗಿ ನಿಲ್ಲುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಲ್ಯಾಣ ಕರ್ನಾಟಕವು ರಾಜ್ಯದ ಬೇರೆ ಬೇರೆ ಭಾಗಗಳ ಜನರಿಗಿಂತ ಒಂದು ಕೈ ಹೆಚ್ಚೆ ಎಂಬಂತೆ ಹೋರಾಟ ಮಾಡಿದೆ.

11. ಭಾರತದಲ್ಲಿ ವಿಲೀನಗೊಳ್ಳಲು ನಿರಾಕರಿಸಿದ ಎರಡು ಪ್ರಾಂತ್ಯಗಳೆಂದರೆ ಮೈಸೂರು ಮತ್ತು
ಹೈದ್ರಾಬಾದ್. ಮೈಸೂರು ಚಲೋ, ಹೈದರಾಬಾದ್ ವಿಮೋಚನಾ ಚಳುವಳಿ, ಎರಡೂಆಯಾ ಭಾಗದ ಜನರು ನಮಗೆ ರಾಜರ ಆಳ್ವಿಕೆ ಸಾಕು, ಪ್ರಜಾಪ್ರಭುತ್ವ ಬೇಕು ಎಂದುಪ್ರಕಟಿಸಿದ ಆಶೋತ್ತರಗಳು. ಜನರ ಆಶೋತ್ತರಗಳಿಗೆ ಮಣಿದ ಮೈಸೂರು ರಾಜಪ್ರಭುತ್ವವು ಬಹುಬೇಗ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿತು. ಆದರೆ ಈ ಭಾಗಕ್ಕೆ ದೊಡ್ಡ ಪ್ರಮಾಣದತ್ಯಾಗ ಬಲಿದಾನಗಳ ಮೂಲಕವೆ ಸ್ವಾತಂತ್ರ್ಯ ದೊರಕಿತು.

12. ಕಲ್ಯಾಣ ಕರ್ನಾಟಕವು ನಾಲ್ಕು ಮಹತ್ವದ ಹೋರಾಟಗಳನ್ನು ಮಾಡಿದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟ, ಕನ್ನಡ ಭಾಷಿಕರು ಒಗ್ಗೂಡುವ ಭಾಷಾವಾರು ಪ್ರಾಂತ್ಯ ರಚನೆಯ ಹೋರಾಟ ಮತ್ತು ಆರ್ಟಿಕಲ್ 371 ಜೆ ರಚನೆಗಾಗಿ ನಡೆದ ಚಳುವಳಿ. ಇವುಗಳನ್ನು ಹೊಸ ತಲೆಮಾರು ಮರೆಯಬಾರದು.

13. ಬ್ರಿಟೀಷರು ಮತ್ತು ನಿಜಾಮರ ಆಳ್ವಿಕೆಯಲ್ಲಿ ಹೈದರಾಬಾದ್-ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಮರಾಠಿ, ತೆಲುಗು, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳ ಅಬ್ಬರದಲ್ಲಿ ಕನ್ನಡ ಭಾಷೆಯನ್ನು ತೀವ್ರವಾಗಿ ಕಡೆಗಣಿಸಲಾಗಿತ್ತಲ್ಲದೆ ಅಭಿವೃದ್ಧಿ ಮರೀಚಿಕೆಯಾಗಿತ್ತು.

14. ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ನಿಜಾಮನ ಆಳ್ವಿಕೆಯಲ್ಲಿದ್ದ ಕಲಬುರಗಿ, ಬೀದರ್ ಹಾಗೂ ರಾಯಚೂರು, ಹಾಗೂ ಮದ್ರಾಸ್ ಪ್ರಾಂತ್ಯದಲ್ಲಿದ ಬಳ್ಳಾರಿ ಜಿಲ್ಲೆ
ಒಳಗೊಂಡಂತೆ ಧರ್ಮಸಿಂಗ್ ವರದಿಯನ್ವಯ 1990 ರಲ್ಲಿ ಹೈದ್ರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿತ್ತು. ಆ ಮೂಲಕ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ರಾಜ್ಯ ಸರ್ಕಾರ ವಿಶೇಷ ನಿಧಿ ನೀಡಲಾಗಿತ್ತು. ಈ ಭಾಗದ ಜನರ ಆಶೋತ್ತರದಂತೆ ಅಭಿವೃದ್ಧಿಯ ವೇಗ ಹೆಚ್ಚಿಸಲು ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸಂವಿಧಾನ ಕಲಂ 371ಕ್ಕೆ ತಿದ್ದುಪಡಿ ತರಬೇಕು ಎನ್ನುವ ಹೋರಾಟವು ದಶಕಗಳ ಕಾಲ ನಡೆಯಿತು.

15. ಹಲವು ದಶಕಗಳ ತೀವ್ರ ಹೋರಾಟ ಹಾಗೂ ಈ ಭಾಗದ ಹಿರಿಯ ರಾಜಕಾರಣಿಗಳಾದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಶ್ರೀಯುತ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎನ್.ಧರಂಸಿಂಗ್ ಅವರ ಅವಿರತ ಪ್ರಯತ್ನ ಹಾಗೂ ಅವರ ಜೊತೆಗೂಡಿದ ಅನೇಕ ಹೋರಾಟಗಾರರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು.

16. ಎಷ್ಟೆಲ್ಲಾ ಪ್ರಯತ್ನ ಮಾಡಿದರೂ ಆಗಿನ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಸರ್ಕಾರ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಿತು. ಆದರೆ, ಶ್ರೀಯುತ ಮಲ್ಲಿಕಾರ್ಜುನ ಖರ್ಗೆ ಅವರ ನಿರಂತರ ಪ್ರಯತ್ನದಿಂದ ಮುಂದೆ ಅಧಿಕಾರಕ್ಕೆ ಬಂದ ಮನಮೋಹನ್ ಸಿಂಗ್ ನೇತೃತ್ವದ ಅಂದಿನ ಯು.ಪಿ.ಎ. ಸರ್ಕಾರ ಡಿಸೆಂಬರ್ 2012 ರಲ್ಲಿ ಸಂವಿಧಾನದ ಕಲಂ 371ಕ್ಕೆ ತಿದ್ದುಪಡಿ ತಂದು 371 (ಜೆ) ಪರಿಚ್ಛೇದ ಸೇರ್ಪಡೆ ಮಾಡಲಾಯಿತು. ರಾಷ್ಟ್ರಪತಿಗಳ ಅಂಕಿತದೊಂದಿಗೆ ಇದು ದಿ:01-01- 2013 ರಿಂದ ಜಾರಿಗೆ ಬಂದಿತು.

17. ಸಂವಿಧಾನದಲ್ಲಿ ಆರ್ಟಿಕಲ್ 371 (ಜೆ) ಪರಿಚ್ಛೇದ ಸೇರ್ಪಡೆಯೊಂದಿಗೆ ಹೈದ್ರಾಬಾದ್- ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರೆತಂತಾಯಿತು. ಹೈದ್ರಾಬಾದ್ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಈ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಯಿತು. ಮುಂದೆ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಪುನರ್ನಾಮಕರಣ ಮಾಡಲಾಯಿತು. ಅಲ್ಲಿಂದ ಈಚೆಗೆ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಯಿತು.

18. ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವ ನಮ್ಮ ಸರ್ಕಾರ ಚುನಾವಣೆಗೆ ಪೂರ್ವದಲ್ಲಿ ನೀಡಿದ ಭರವಸೆಗಳಂತೆ “ಪಂಚ ಗ್ಯಾರಂಟಿ” ಯೋಜನೆಗಳನ್ನು ಜಾರಿಗೆ ತರುವ ಮೂಲಕ “ನುಡಿದಂತೆ ನಡೆಯುವ ಸರ್ಕಾರ” ಎಂಬುದನ್ನು ಸಾಬೀತುಪಡಿಸಿತು.

19. “ಶಕ್ತಿ” ಯೋಜನೆಯಡಿ ಪ್ರತಿ ದಿನ 50 ರಿಂದ 60 ಲಕ್ಷ ಜನ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದು, ವಾರ್ಷಿಕವಾಗಿ ಸರ್ಕಾರವು ಇದಕ್ಕಾಗಿ 4,000 ಕೋಟಿ ರೂ. ವೆಚ್ಚ ಮಾಡಲಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಆಗಸ್ಟ್-2024ರ ಅಂತ್ಯಕ್ಕೆ ದಿನನಿತ್ಯ 17.11 ಲಕ್ಷದಂತೆ 41.45 ಕೋಟಿ ಟ್ರಿಪ್ ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಇದರ ವೆಚ್ಚ 1,387 ಕೋಟಿ ರೂ. ಗಳನ್ನು ನಮ್ಮ ಸರ್ಕಾರ ಭರಿಸುತ್ತಿದೆ.

20. “ಅನ್ನ ಭಾಗ್ಯ” ಯೋಜನೆಯಡಿ 10 ಕೆ.ಜಿ. ಆಹಾರ ಧಾನ್ಯ ನೀಡಲಾಗುತ್ತಿದೆ. ಇದರಲ್ಲಿ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆ.ಜಿ.ಗೆ 34 ರೂ. ಗಳಂತೆ ತಲಾ ಸದಸ್ಯರಿಗೆ 170 ರೂ. ಗಳನ್ನು ಡಿ.ಬಿ.ಟಿ. ಮೂಲಕ ಹಣ ಪಾವತಿಸಲಾಗುತ್ತಿದೆ. ಪ್ರದೇಶದ 7 ಜಿಲ್ಲೆಗಳಲ್ಲಿ ಕಳೆದ ಜೂನ್- 2024 ಮಾಹೆಗೆ ಒಟ್ಟು 22.59 ಲಕ್ಷ ಪಡಿತರ ಚೀಟಿಯ ಕುಟುಂಬದ ಸದಸ್ಯರಿಗೆ 1,551 ಕೋಟಿ ರೂ. ಹಣ ಪಾವತಿಸಿದೆ.

21. 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ “ಗೃಹ ಜ್ಯೋತಿ” ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದ ಜೆಸ್ಕಾಂ ವ್ಯಾಪ್ತಿಯಲ್ಲಿ 21.88 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡು ಯೋಜನೆಯ ಲಾಭ ಪಡೆದಿದ್ದಾರೆ. ಇದಕ್ಕಾಗಿ ಸರ್ಕಾರ 1,104 ಕೋಟಿ ರೂ. ಜೆಸ್ಕಾಂಗೆ ಸಬ್ಸಿಡಿ ಪಾವತಿಸಿದೆ.

22. ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಒದಗಿಸುವ “ಗೃಹ ಲಕ್ಷ್ಮಿ” ಯೋಜನೆಯಡಿ ಕಲಬುರಗಿ ವಿಭಾಗದ 7 ಜಿಲ್ಲೆಗಳಲ್ಲಿ ಇದುವರೆಗೆ 24.53 ಲಕ್ಷ ಮಹಿಳೆಯರಿಗೆ ತಲಾ 2,000 ರೂ. ಗಳಂತೆ 5000 ಕೋಟಿ ರೂ. ಗಳನ್ನು ಡಿ.ಬಿ.ಟಿ. ಮೂಲಕ ಪಾವತಿಸಿದೆ. ಇದರಿಂದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದಂತಾಗಿದೆ.

23. 2022-23ನೇ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೋಮಾ ಮತ್ತು ಪದವಿ ಉತ್ತೀರ್ಣರಾದ ನಿರುದ್ಯೋಗಿಗಳಿಗೆ ಕ್ರಮವಾಗಿ ಮಾಸಿಕ 1,500 ಮತ್ತು 3,000 ಭತ್ಯೆ ನೀಡುವ “ಯುವ ನಿಧಿ” ಯೋಜನೆಯಡಿ ಇದೂವರೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 49,691 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ ಅರ್ಹ 22,272 ನಿರುದ್ಯೋಗಿಗಳಿಗೆ 28.39 ಕೋಟಿ ರೂ.ಗಳನ್ನು ಡಿ.ಬಿ.ಟಿ. ಮೂಲಕ ಹಣ ಪಾವತಿಸಲಾಗಿದೆ.

24. ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 48 ರಿಂದ 60 ಸಾವಿರ ರೂ. ಸೌಲಭ್ಯ ಲಭಿಸಲಿದೆ. ಜಾತಿ-ಧರ್ಮ ಇಲ್ಲದೆ ಪ್ರತಿಯೊಬ್ಬರನ್ನು ಆರ್ಥಿಕವಾಗಿ ಸುಸ್ಥಿರವಾಗಿರಿಸಲು ಹಾಕಿಕೊಂಡಿರುವ ಈ ಯೋಜನೆಗಳು ಬಡವರ ಬದುಕನ್ನೆ ಬದಲಿಸುವ ಕರ್ನಾಟಕ ಮಾದರಿ ಆಡಳಿತದ ಗ್ಯಾರಂಟಿ ಯೋಜನೆಗಳಾಗಿ ಪರಿವರ್ತನೆಗೊಂಡಿರುವುದಕ್ಕೆ ಸಂತೃಪ್ತಿ ಭಾವ ನನ್ನಲ್ಲಿ ಮೂಡಿದೆ.

25. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸಕ್ತ 2024-25ನೇ ಸಾಲಿನ ಆಯವ್ಯಯದಲ್ಲಿ ದಾಖಲೆ ಪ್ರಮಾಣದಲ್ಲಿ 5,000 ಕೋಟಿ ರೂ. ಘೋಷಿಸಿ ಅನುದಾನ ಹಂಚಿಕೆ ಮಾಡಲಾಗಿದೆ.

26. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು 5,000 ಕೋಟಿ ರೂ. ಮೊತ್ತಕ್ಕೆ ಸಲ್ಲಿಸಿದ ಕ್ರಿಯಾ ಯೋಜನೆಗೆ ನಮ್ಮ ಸರ್ಕಾರ ಈಗಾಗಲೆ ಅನುಮೋದನೆ ನೀಡಿದ್ದು, ಪ್ರದೇಶದಲ್ಲಿ ಅಭಿವೃದ್ಧಿಯ ಹೊಸ ಕ್ರಾಂತಿ ನಿರೀಕ್ಷಿಸಲಾಗಿದೆ.
27.ಡಾ.ಡಿ.ಎಂ. ನಂಜುಂಡಪ್ಪ ವರದಿಯನ್ನು 2002ರಲ್ಲಿ ಸಲ್ಲಿಸಲಾಗಿದ್ದು, ಆ ನಂತರದಲ್ಲಿ ತಾಲ್ಲೂಕುಗಳ ಸಾಮಾಜಿಕ ಆರ್ಥಿಕ ಹಾಗೂ ಇನ್ನಿತರೆ ಆಯಾಮಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...