ಬೆಂಗಳೂರು: ಮುಸ್ಲಿಂ ಮಹಿಳೆಯರ ಬಗ್ಗೆ ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ನಾಡಿನ ಸಾಹಿತಿಗಳು, ಲೇಖಕರು, ಹೋರಾಟಗಾರರನ್ನೊಳಗೊಂಡ ಜಾಗೃತ ನಾಗರೀಕರು ಕರ್ನಾಟಕ ಸಂಘಟನೆ ಖಂಡಿಸಿದೆ. ಪ್ರಭಾಕರ ಭಟ್ ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.
ಮಹಿಳೆಯರ ಘನತೆ ಗೌರವಕ್ಕೆ ಧಕ್ಕೆ ತರುವಂತೆ ಪ್ರಭಾಕರ ಭಟ್ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಸಮುದಾಯದ ಮಹಿಳೆಯರು ಮಾತ್ರವಲ್ಲ, ಎಲ್ಲಾ ಸಮುದಾಯದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಸರ್ಕಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಹನುಮಾನ್ ಸಂಕೀರ್ತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್ ಅವರು ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ತ್ರಿವಳಿ ತಲಾಖ್ ರದ್ದುಪಡಿಸುವ ಮೂಲಕ ಪರ್ಮನೆಂಟ್ ಗಂಡನನ್ನು ಕೊಟ್ಟಿದ್ದು ಮೋದಿ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೇಳಿಕೆಯನ್ನು ಖಂಡಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.
ಪ್ರೊ.ಕೆ. ಮರುಳಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ಡಾ. ಜಿ. ರಾಮಕೃಷ್ಣ, ಡಾ. ಬಂಜಗೆರೆ ಜಯಪ್ರಕಾಶ್. ಪ್ರೊ. ರಾಜೇಂದ್ರ ಚೆನ್ನಿ, ಡಾ. ವಿಜಯಾ, ಡಾ. ವಸುಂಧರಾ ಭೂಪತಿ, ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ಹಲವು ಸಾಹಿತಿಗಳು ಕ್ರಮಕ್ಕೆ ಒತ್ತಾಯಿಸಿದ್ದಾರೆ.