ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ವಿಷ್ಣುವಿನ 10ನೇ ಅವತಾರವಾದ ಭಗವಾನ್ ಕಲ್ಕಿಯ ದೇವಾಲಯ ತಲೆಯೆತ್ತಲಿದೆ. ದೇವಾಲಯದ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ನೆರವೇರಿಸಿದ್ದಾರೆ. ಸಂಭಾಲ್‌ನ ಅಂಚೋದ ಕಾಂಬೋದಲ್ಲಿ ನಿರ್ಮಿಸಲಾಗುತ್ತಿರುವ ಕಲ್ಕಿ ಧಾಮದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ.
ಇಡೀ ದೇವಾಲಯದ ಸಂಕೀರ್ಣ ಬಿಳಿ ಮತ್ತು ಕೇಸರಿ ಬಣ್ಣಗಳಲ್ಲಿ ಗಮನ ಸೆಳೆಯಲಿದೆ. ಕಲ್ಕಿ ಧಾಮವನ್ನು ವಿಶ್ವದ ಅತ್ಯಂತ ವಿಶಿಷ್ಟವಾದ ದೇವಾಲಯ ಎಂದೇ ಹೇಳಲಾಗ್ತಿದೆ. ಈ ದೇವಾಲಯದಲ್ಲಿ ಒಂದಲ್ಲ 10 ಗರ್ಭಗುಡಿಗಳು ಇರುತ್ತವೆ. ವಿಷ್ಣುವಿನ 10 ಅವತಾರಗಳ 10 ವಿವಿಧ ಗರ್ಭಗುಡಿಗಳನ್ನು ಸ್ಥಾಪಿಸಲಾಗುವುದು.
ಅಯೋಧ್ಯೆಯ ಸೋಮನಾಥ ದೇವಾಲಯ ಮತ್ತು ರಾಮಮಂದಿರವನ್ನು ನಿರ್ಮಿಸಿದ ಅದೇ ಗುಲಾಬಿ ಬಣ್ಣದ ಕಲ್ಲಿನಿಂದ ಕಲ್ಕಿ ಧಾಮವನ್ನು ನಿರ್ಮಿಸಲಾಗುವುದು. ಈ ದೇವಾಲಯದ ಶಿಖರವು 108 ಅಡಿ ಎತ್ತರವಿರಲಿದೆ. ದೇವಸ್ಥಾನದ ವೇದಿಕೆಯನ್ನು 11 ಅಡಿ ಎತ್ತರದಲ್ಲಿ ನಿರ್ಮಿಸಲಾಗುವುದು. ಇಲ್ಲಿ 68 ಯಾತ್ರಾ ಸ್ಥಳಗಳನ್ನು ಸ್ಥಾಪಿಸಲಾಗುವುದು.
ಸುಮಾರು 5 ಎಕರೆ ಪ್ರದೇಶದಲ್ಲಿ ಕಲ್ಕಿ ದೇವಸ್ಥಾನ ತಲೆಯೆತ್ತಲಿದೆ. ಇದರ ನಿರ್ಮಾಣಕ್ಕೆ 5 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಕಲ್ಕಿ ಪೀಠವು ಹಳೆಯ ಸ್ಥಳದಲ್ಲಿಯೇ ಉಳಿಯಲಿದೆ ಎಂಬುದು ಗಮನಾರ್ಹ. ಕಲ್ಕಿಧಾಮವನ್ನು ನಿರ್ಮಿಸಿದಾಗ, ಹೊಸ ದೇವರ ವಿಗ್ರಹವಿರುತ್ತದೆ. ಇದಕ್ಕಾಗಿ ಅದ್ಭುತ ಪ್ರತಿಮೆ ತರಲಾಗುವುದು.
ದೇಶ ವಿದೇಶಗಳ ಸಂತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಸಂತರು, ಋಷಿಮುನಿಗಳಿಗೆ ಗುಡಾರ ನಗರಿ ಕಲ್ಕಿಪುರಂನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸುಮಾರು 11 ಸಾವಿರ ಸಂತರು, ಮುನಿಗಳು ಆಗಮಿಸುತ್ತಿದ್ದಾರೆ. ಸನಾತನ ಸಂಸ್ಥೆಯ ಹೊಸ ಉದಯಕ್ಕೆ ಸಾಕ್ಷಿಯಾಗಲು ಕಲ್ಕಿಧಾಮ ಸಿದ್ಧವಾಗಿದೆ.