ಬೆಂಗಳೂರು: ಶಿಕ್ಷಣ ಇಲಾಖೆಯಿಂದ ‘ಕಲಿಕಾ ಹಬ್ಬ’ ಆಚರಣೆಗೆ ನಿರ್ಧರಿಸಲಾಗಿದೆ. ಮೂರು ದಿನಗಳ ಕಾಲ ಶಾಲೆಗಳಲ್ಲಿ ಹಾಡು, ಆಡು, ಬಣ್ಣ, ಊರು ಸುತ್ತೋಣ ಪರಿಕಲ್ಪನೆಯಲ್ಲಿ ಕಲಿಕಾ ಹಬ್ಬ ನಡೆಸಲಾಗುತ್ತದೆ.
ಕ್ಲಸ್ಟರ್ ಮಟ್ಟದಲ್ಲಿ ಎರಡು ದಿನ, ಜಿಲ್ಲಾ ಹಂತದಲ್ಲಿ ಮೂರು ದಿನ ಕಲಿಕಾ ಹಬ್ಬ ಆಚರಣೆಗೆ ಸೂಚಿಸಲಾಗಿದೆ. ಜನವರಿಯಿಂದ ಫೆಬ್ರವರಿ ಒಳಗೆ ಅನುಕೂಲಕ್ಕೆ ತಕ್ಕಂತೆ ದಿನಾಂಕ ನಿಗದಿಪಡಿಸಿಕೊಂಡು ಕಲಿಕಾ ಹಬ್ಬ ಆಚರಿಸಲು ತಿಳಿಸಲಾಗಿದೆ. 4ರಿಂದ 9ನೇ ತರಗತಿ ಮಕ್ಕಳು ಇದರಲ್ಲಿ ಭಾಗವಹಿಸಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ‘ಕಲಿಕಾ ಚೇತರಿಕೆ’ಯ ನಂತರ ಶಿಕ್ಷಣ ಇಲಾಖೆ ಕಲಿಕಾ ಹಬ್ಬ ಆಯೋಜಿಸುತ್ತಿದ್ದು, ಮಕ್ಕಳಲ್ಲಿ ಕಲಿಕೆಯ ಕುತೂಹಲ ಮೂಡಿಸುವ ಉದ್ದೇಶವಿದೆ.
ಜನವರಿಯಲ್ಲಿ ಎರಡು ಹಂತದಲ್ಲಿ ಹಬ್ಬ ನಡೆಯಲಿದ್ದು, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಕುತೂಹಲ ಮೂಡಿಸಿ ಅವರಲ್ಲಿ ಪ್ರಶ್ನೆ ಮೂಡುವಂತೆ ಮಾಡುವುದು, ಸಂತಸದಾಯಕ ಕಲಿಕೆ ಪ್ರಕ್ರಿಯೆ, ಹಿಂಜರಿಕೆ ಹೋಗಲಾಡಿಸಿ ಆತ್ಮವಿಶ್ವಾಸ ಹೆಚ್ಚಿಸುವುದು, ವಿಭಿನ್ನ ವಾತಾವರಣ, ಗುಂಪಿನಲ್ಲಿ ಕಲಿಕೆ ಮೊದಲಾದ ಉದ್ದೇಶದಿಂದ ಕಲಿಕಾ ಹಬ್ಬ ಆಚರಣೆಗೆ ನಿರ್ಧರಿಸಲಾಗಿದೆ.