ಕಾರವಾರ: ಭಾರಿ ಮಳೆಯಿಂದಾಗಿ ಕಾಳಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸೂಪಾ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ನೀರು ಹೊರಬಿಡಲು ಸಿದ್ಧತೆ ನಡೆಸಲಾಗಿದ್ದು, ಕಾಳಿ ನದಿ ತೀರದಲ್ಲಿ ಪ್ರವಾಹ ಭೀತಿ ಶುರುವಾಗಿದೆ.
ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ಹೆಚ್ಚುವರಿ ನೀರು ಹೊರಬಿಡುವ ಸಾಧ್ಯತೆ ಇದ್ದು, ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಅಣೆಕಟ್ಟೆಯ ಕೆಳದಂಡೆಯಲ್ಲಿರುವ ಜನರಿಗೆ ಕೆಪಿಸಿಎಲ್ ಮನವಿ ಮಾಡಿದೆ.
ಸೂಪಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿರುವುದರಿಂದ ಜಲಾಶಯದ ನೀರಿನ ಮಟ್ಟ ಸತತವಾಗಿ ಏರಿಕೆಯಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 564 ಮೀಟರ್ ಆಗಿದ್ದು, ನೀರಿನ ಸಂಗ್ರಹಣಾ ಸಾಮರ್ಥ್ಯ 147.55 ಟಿಎಂಸಿ ಆಗಿದೆ. ಪ್ರಸ್ತುತ (ಆ. 25ರಂದು) 558.95 ಅಡಿಗೂ ಹೆಚ್ಚು ನೀರು ನಿಂತಿದ್ದು, 126.662 ಟಿಎಂಸಿ ನೀರು ಸಂಗ್ರಹವಾಗಿದೆ. ಅಲ್ಲದೆ, ಜಲಾಶಯದ ಒಳಹರಿವು 25,954 ಕ್ಯುಸೆಕ್ ಇದೆ.
ಇದೇ ರೀತಿ ಒಳಹರಿವು ಮುಂದುವರಿದರೆ ಜಲಾಶಯವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದ್ದು, ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಜಲಾಶಯದಿಂದ ಹೊರಬಿಡಬೇಕಾಗುತ್ತದೆ. ಆದ್ದರಿಂದ ಅಣೆಕಟ್ಟೆಯ ದಂಡೆಯಲ್ಲಿರುವ ಮತ್ತು ನದಿಯ ಪಾತ್ರದುದ್ದಕ್ಕೂ ಇರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ಇತ್ಯಾದಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಕೆಪಿಸಿಎಲ್ ಮನವಿ ಮಾಡಿದೆ.
ಅಣೆಕಟ್ಟೆಯ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ, ಜಲ ಸಾಹಸ ಕ್ರೀಡೆಗಳು ಸೇರಿದಂತೆ ಇತರೆ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೂ ನಿಷೇಧಿಸಲಾಗಿದೆ.