
ಚೆನ್ನೈ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ಹಲವಾರು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಿರುವ ನೃತ್ಯ ಶಿಕ್ಷಕನ ವಿರುದ್ಧ ಸಂಸ್ಥೆಯ ನಿಷ್ಕ್ರಿಯತೆಯನ್ನು ಖಂಡಿಸಿ ಕಲಾಕ್ಷೇತ್ರ ಫೌಂಡೇಶನ್ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಆರೋಪಿ ಶಿಕ್ಷಕನನ್ನು ಕೂಡಲೇ ಅಮಾನತು ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಕ್ಯಾಂಪಸ್ ನ ಆಲದ ಮರದ ಕೆಳಗೆ ಬೆಳಗ್ಗೆಯಿಂದ ಮೌನ ಪ್ರತಿಭಟನೆ ನಡೆಸಿದರು. ನಂತರ ಸಂಜೆ ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದ ತಿರುವಣ್ಮಯೂರ್ ರಸ್ತೆಯವರೆಗೆ “ನಮಗೆ ನ್ಯಾಯ ಬೇಕು” ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಂಸ್ಥೆಯ ನಿರ್ದೇಶಕಿ ರೇವತಿ ರಾಮಚಂದ್ರನ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಧರಣಿ ಕೈಬಿಡುವಂತೆ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆಡಳಿತವು ಸಮಸ್ಯೆಯನ್ನು ನಿಭಾಯಿಸುವ ರೀತಿ ಸರಿ ಇಲ್ಲ. ಕುಂದುಕೊರತೆಗಳ ಬಗ್ಗೆ ಮಾತನಾಡಲು ನ್ಯಾಯಯುತವಾದ ಅವಕಾಶವನ್ನು ನೀಡುತ್ತಿಲ್ಲ ಎಂದು ಆಕ್ರೋಶಗೊಂಡ ವಿದ್ಯಾರ್ಥಿಯೊಬ್ಬರು ಹೇಳಿದರು.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಬುಧವಾರ ಕ್ಯಾಂಪಸ್‌ಗೆ ಭೇಟಿ ನೀಡಿ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ವಿಚಾರಣೆ ನಡೆಸಿದ ಒಂದು ದಿನದ ನಂತರ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿದೆ. ಎನ್‌ಸಿಡಬ್ಲ್ಯೂ ಅಧ್ಯಕ್ಷರೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.