ಕಲಬುರ್ಗಿ: ಬರೋಬ್ಬರಿ 11 ತಿಂಗಳ ಕಾಲ ಶಾಲೆಗೆ ಬಾರದೇ ಗೈರಾಗಿದ್ದ ಶಿಕ್ಷಕನಿಗೆ ವೇತನ ನೀಡಿದ ಹಿನ್ನೆಲೆಯಲ್ಲಿ ಬಿಇಒ ಹಾಗೂ ಇಬ್ಬರು ಎಫ್ ಡಿಎ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿ ಆದೇಶ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಆಳಂದ ತಾಲೂಕಿನ ಅಂಬಲಗಾ ಪ್ರಾಥಮಿಕ ಶಾಲೆಯ ಶಿಕ್ಷಕ ರೇಣುಕಾಚಾರ್ಯ ಎಂಬುವವರು 2011ರ ಅಕ್ಟೋಬರ್ ನಿಂದ 2012ರ ಆಗಸ್ಟ್ ವರೆಗೆ ಶಾಲೆಗೆ ಗೈರಾಗಿದ್ದರು. ಆದರೂ ಶಿಕ್ಷಕನಿಗೆ ಸಂಬಳ ಬಿಡುಗಡೆ ಮಾಡಲಾಗಿತ್ತು. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಇಲಾಖೆಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದಾಗ ಆರೋಪ ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಇಲಾಖೆ, ಬಿಇಒ ಚಿತ್ರಶೇಖರ ದೇಗುಲಮಡಿ, ಎಫ್ ಡಿಎ ಗಳಾದ ಲೋಕಪ್ಪ ಜಾಧವ್, ಗುರುರಾಜರಾವ್ ಕುಲಕರ್ಣಿ ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿ ಆದೇಶ ನೀಡಿದೆ.