ಕಲಬುರ್ಗಿ: ಕಲಬುರ್ಗಿಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ವಿದ್ಯಾರ್ಥಿಗಳಿಂದ ಖಾಲಿ ಚೆಕ್ ಪಡೆದು ನೂರಾರು ಕೋಟಿ ರೂಪಾಯಿ ಶಿಷ್ಯವೇತನಕ್ಕೆ ಕನ್ನಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ವೈದ್ಯಕೀಯ ವಿದ್ಯಾರ್ಥಿಗಳು ದೂರು ನೀಡಿದರೂ ಆಡಳಿತ ಮಂಡಳಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ವೈದ್ಯಕೀಯ ಪಿಜಿ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯವಾಗಲೆಂದು ಸರ್ಕಾರ ನಿಯಾಮವಳಿಗಳ ಪ್ರಕಾರ ಸ್ಟೈಫಂಡ್ ನೀಡುತ್ತದೆ. ಆದರೆ ಹೀಗೆ ನೀಡುವ ಸ್ಟೈಫಂಡ್ ಗೆ ವಿದ್ಯಾಲಯ ಕನ್ನ ಹಾಕಿದೆ. ಶಿಷ್ಯವೇತನವನ್ನು ದುರ್ಬಳಕೆ ಮಾಡಿಕೊಂಡಿರುವ ಮಹದೇವಪ್ಪ ರಾಂಪುರೆ ವೈದ್ಯಕೀಯ ವಿದ್ಯಾಲಯದ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆದರೆ ಆಡಳಿತ ಮಂಡಳಿ ವಿರುದ್ಧ ಎಫ್ ಐ ಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ನಾನಾ ಕಾರಣಗಳನ್ನು ನೀಡಿ ಎಫ್ ಐ ಆರ್ ದಾಖಲಿಸದೇ ಕೇವಲ ದೂರು ದಾಖಲಿಸಿಕೊಂಡು ಪರಿಶೀಲಿಸುವುದಾಗಿ ಹೇಳುತ್ತಿದ್ದಾರೆ. ಕಾಲೇಜಿನ ಡೀನ್ ಪೊಲೀಸ್ ಠಾಣೆಗೆ ಆಗಮಿಸಿದ್ದು, ಬೆದರಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.