ಕಲಬುರ್ಗಿ: ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ಕ್ವಾಟರ್ಸ್ ಒಳಗೆ ನುಗ್ಗಿದ್ದ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರ ವಿರುದ್ಧ ಎಫ್ ಐ ಆರ್ ದಾಖಲಿಸಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
9 ಹಿಂದೂ ಕಾರ್ಯಕರ್ತರ ವಿರುದ್ಧ ರಟಕಲ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ನರ್ಸ್ ಅಶ್ವಿನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಟ್ರಾಸಿಟಿ ಆಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಹಿಂದು ಜಾಗೃತ ಸೇನೆಯ ಅಧ್ಯಕ್ಷ ಶಂಕರ್ ಚೋಕಾ, ಬಸವರಾಜ್, ವಿಷ್ಣು ಸೇರಿದಂತೆ ಒಟ್ಟು 9 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಲಬುರ್ಗಿಯ ರಟಕಲ್ ಗ್ರಾಮದಲ್ಲಿ ಸರ್ಕಾರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕ್ವಾರ್ಟರ್ಸ್ ನಲ್ಲಿ ಹಣದ ಆಮಿಷವೊಡ್ಡಿ ಬಲವಂತದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಹಿಂದೂ ಜಾಗೃತ ಸೇನೆಯ ಕಾರ್ಯಕರ್ತರು ದಾಳಿ ನಡೆಸಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಹಿಂದೂ ಜಾಗೃತಿ ಸೇನೆ ಕೂಡ ಮಂತಾಂತರಕ್ಕೆ ಯತ್ನ ಹಿನ್ನೆಲೆಯಲ್ಲಿ ದೂರು ದಾಖಲಿಸಿತ್ತು.
ಇದೀಗ ನರ್ಸ್ ನೀಡಿದ ದೂರಿನ ಮೇರೆಗೆ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಾಗಿದೆ.