
ಕಲಬುರಗಿ: ಕಲಬುರಗಿ ಜಿಲ್ಲೆಯ ಗರೂರು ಬಿ ಗ್ರಾಮದಲ್ಲಿ ಮೊಸಳೆ ಕಾಟದಿಂದಾಗಿ ಗ್ರಾಮಸ್ಥರು, ರೈತರು ಹೈರಾಣಾಗಿದ್ದಾರೆ. ಗ್ರಾಮದ ಮನೆಗಳಿಗೆ ಮೊಸಳೆಗಳು ನುಗ್ಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಬೃಹತ್ ಮೊಸಳೆಯನ್ನು ಸೆರೆಹಿಡಿದು, ಜೆಸ್ಕಾಂ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ.
ಜೀವಂತ ಮೊಸಳೆಯೊಂದಿಗೆ ಜೆಸ್ಕಾಂ ಕಚೇರಿಗೆ ಆಗಮಿಸಿದ ಗ್ರಾಮಸ್ಥರು ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಭೀಮಾ ನದಿ ತೀರದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದೆ. ಜನ, ಜಾನುವಾರುಗಳು ಆತಂಕದಲ್ಲೇ ದಿನ ಕಳೆಯಬೇಕಾದ ಸ್ಥಿತಿ. ಈ ಮಧ್ಯೆ ಜೆಸ್ಕಾಂ ಸಿಬ್ಬಂದಿ ಮುಂಜಾನೆ 4 ಗಂಟೆ ಸುಮಾರಿಗೆ ಮಾತ್ರ ತ್ರಿ ಫೇಸ್ ಕರೆಂಟ್ ಪೂರೈಸುತ್ತಾರೆ. ಮುಂಜಾನೆ ನಾಲ್ಕು ಗಂಟೆಗೆ ಕೃಷಿ ಜಮೀನಿಗೆ ನೀರು ಹರಿಸಲು ಮೋಟಾರ್ ಆನ್ ಮಾಡಲು ನದಿ ಬಳಿ ಹೋಗಬೇಕು. ಇಂತಹ ಸಂದರ್ಭದಲ್ಲಿ ಮೊಸಳೆಗಳು ದಾಳಿ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.
ಗ್ರಾಮಗಳಿಗೂ ಮೊಸಳೆಗಳು ಬರುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.