ಕಲಬುರಗಿ: ಮಠಾಧೀಶರು ರಾಜಕೀಯ ಮಾಡುವುದು ಸರಿಯಲ್ಲ, ಯಡಿಯೂರಪ್ಪ ಅವರಿಗೆ ಯೋಗ್ಯತೆ ಇದ್ದರೆ ಹೈಕಮಾಂಡ್ ಅವರನ್ನು ಮುಂದುವರೆಸುತ್ತದೆ ಎಂದು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನನೆಲೋಗಿ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರವಾಗಿ ಮಲೆನಾಡಿನ ಮಠಾಧೀಶರು ಬೆಂಬಲ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಸುವುದು ಮಠಾಧೀಶರ ತೀರ್ಮಾನವಲ್ಲ, ಹೈಕಮಾಂಡ್ ತೀರ್ಮಾನವಾಗಿದೆ. ಅವರಿಗೆ ಯೋಗ್ಯತೆ ಇದ್ದರೆ ಹೈಕಮಾಂಡ್ ಮುಂದುವರೆಸುತ್ತದೆ. ಇಲ್ಲದಿದ್ದರೆ ತೆಗೆದುಹಾಕುತ್ತದೆ. ಮಠಾಧೀಶರ ಮಾತು ಕೇಳಿ ಬಿಜೆಪಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಸಂದರ್ಭದಲ್ಲಿ ಯಾವ ಮಠಾಧೀಶರೂ ಚಕಾರ ಎತ್ತಲಿಲ್ಲ. ಈಗ ಯಡಿಯೂರಪ್ಪನವರ ವಿಷಯದಲ್ಲಿ ಮಾತಾಡುತ್ತಿದ್ದಾರೆ. ರಾಜಕೀಯದಲ್ಲಿ ಮಠಾಧೀಶರು ಮಧ್ಯಪ್ರವೇಶಿಸುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.