ಕಲಬುರಗಿ: ರಸ್ತೆ ಸಾರಿಗೆ ನೌಕರರ ಮುಷ್ಕರದಲ್ಲಿ ಪಾಲ್ಗೊಂಡು ಕರ್ತವ್ಯಕ್ಕೆ ಗೈರಾದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 8 ತರಬೇತಿ ಸಿಬ್ಬಂದಿ ಮತ್ತು 23 ಖಾಯಂ ಸಿಬ್ಬಂದಿ ಸೇರಿ 31 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.
ಇದಲ್ಲದೆ ಸಾರ್ವಜನಿಕ ಹಿತದೃಷ್ಠಿ ಮತ್ತು ಆಡಳಿತಾತ್ಮಕ ಕಾರಣದಿಂದ 53 ಚಾಲನಾ ಸಿಬ್ಬಂದಿ, 20 ತಾಂತ್ರಿಕ ಸಿಬ್ಬಂದಿ, 2 ಆಡಳಿತ ಸಿಬ್ಬಂದಿ ಸೇರಿದಂತೆ 75 ಸಿಬ್ಬಂದಿಗಳಿಗೆ ಸಂಸ್ಥೆಯ ಅಂತರ ವಿಭಾಗ ವರ್ಗಾವಣೆ ಮಾಡಲಾಗಿದೆ.
122 ಚಾಲನಾ ಮತ್ತು 27 ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 149 ಸಿಬ್ಬಂದಿಗಳ ಎರವಲು ಸೇವೆ ರದ್ದುಗೊಳಿಸಿ ಮೂಲ ಹುದ್ದೆಯ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಷ್ಕರದ ನಡುವೆಯೂ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗದಂತೆ 358 ಖಾಸಗಿ ಬಸ್, 191 ಆಂಧ್ರಪ್ರದೇಶ ಮತ್ತು ತೆಲಂಗಾಣಾ ಸಾರಿಗೆ ಸಂಸ್ಥೆಯ ವಾಹನಗಳು ಹಾಗೂ 2757 ಇತರೆ ವಾಹನಗಳನ್ನು ಬಸ್ ನಿಲ್ದಾಣದ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಸಿಬ್ಬಂದಿ ಮನವೊಲಿಕೆ, 270 ಬಸ್ ರಸ್ತೆಗೆ:
ಶನಿವಾರ ಮುಷ್ಕರದಲ್ಲಿ ನಿರತ ಸಿಬ್ಬಂದಿಗಳ ಮನವೊಲಿಸಿ ಸಂಸ್ಥೆಯ 270 ವಾಹನಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ. ಹೊಸಪೇಟೆ ವಿಭಾಗದಲ್ಲಿ ಶೇ. 40ರಷ್ಟು ವಾಹನಗಳು ರಸ್ತೆಗೆ ಇಳಿದಿವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮರಾವ್ ತಿಳಿಸಿದ್ದಾರೆ.
4.5 ಕೋಟಿ ಆದಾಯದಲ್ಲಿ ಕೊರತೆ:
ಸಾರಿಗೆ ನೌಕರರ ಮುಷ್ಕರದಿಂದ ಸಂಸ್ಥೆಗೆ 4.5 ಕೋಟಿ ರೂ. ಆದಾಯದಲ್ಲಿ ಕೊರತೆಯಾಗಿದ್ಸು, ಹೀಗಾಗಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಲ್ಲಿ ಮನವಿ ಮಾಡಿದ್ದಾರೆ.