ಕಲಬುರ್ಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಕಂ ಡ್ರೈವರ್ ಹುದ್ದೆ ಪಡೆಯಲು ಅಭ್ಯರ್ಥಿಗಳು ಏನೆಲ್ಲ ಕಳ್ಳಾಟ ನಡೆಸಿದ್ದಾರೆ. ದೇಹಕ್ಕೆ ಕಬ್ಬಿಣದ ಕಲ್ಲು, ಸರಪಳಿ ಕಟ್ಟಿಕೊಂಡು ತೂಕ ಹೆಚ್ಚಿಸಿಕೊಂಡು ಪರೀಕ್ಷೆಗೆ ಹಾಜರಾಗಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ದೇಹದಾರ್ಢ್ಯ ಪರೀಕ್ಷೆಗಾಗಿ ನಾಲ್ವರು ಅಭ್ಯರ್ಥಿಗಳು ನಿಗದಿತ ತೂಕ ತೋರಿಸುವ ನಿಟ್ಟಿನಲ್ಲಿ ಒಳ ಉಡುಪಿನಲ್ಲಿ ಕಬ್ಬಿಣದ ಕಲ್ಲು, ಕಾಲು, ಸೊಂಟಕ್ಕೆ ಸರಪಳಿ, ತೂಕದ ಕಲ್ಲುಗಳನ್ನು ಕಟ್ಟಿಕೊಂಡು ಬಂದಿದ್ದಾರೆ. ಅಭ್ಯರ್ಥಿಗಳ ಚಾಲಾಕಿತನ ಕಂಡು ಸಾರಿಗೆ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಶಾಕ್ ಆಗಿದ್ದಾರೆ.
ಚಾಲಕ ಕಂ ನಿರ್ವಾಹಕ ಹುದ್ದೆಗೆ 163 ಸೆಂಟಿ ಮೀಟರ್ ಎತ್ತರ ಮತ್ತು 55 ಕೆಜಿ ತೂಕ ಹೊಂದಿರಬೇಕು. ಕಡಿಮೆ ತೂಕ ಹೊಂದಿದ್ದ ನಾಲ್ವರು ಅಭ್ಯರ್ಥಿಗಳು ಒಳ ಉಡುಪಿನಲ್ಲಿ 5 ಕೆಜಿ ತೂಕದ ಕಲ್ಲು, ಸೊಂಟ ಹಾಗೂ ಕಾಲಿಗೆ ಕಬ್ಬಿಣದ ಪಟ್ಟಿ, ಕಬ್ಬಿಣದ ಕಲ್ಲುಗಳನ್ನು ಕಟ್ಟಿಕೊಂಡು ದೇಹದಾರ್ಢ್ಯ ಪರೀಕ್ಷೆಗೆ ಹಾಜರಾಗಿ ಸಿಕ್ಕಿ ಬಿದ್ದಿದ್ದಾರೆ. ದೇಹದಾರ್ಢ್ಯ ಪರೀಕ್ಷೆ ವೇಳೆ ಸಾರಿಗೆ ಸಿಬ್ಬಂದಿಗಳು ಪರಿಶೀಲಿಸಿದಾಗ ನಾಲ್ವರು ಅಭ್ಯರ್ಥಿಗಳ ಕಳ್ಳಾಟ ಬಯಲಾಗಿದ್ದು, ನಾಲ್ವರು ಅಭ್ಯರ್ಥಿಗಳ ಆಯ್ಕೆ ಕೈಬಿಡಲಾಗಿದೆ.