ಕಲಬುರಗಿ: ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಗಳು ಏಕಾಏಕಿ ಪ್ರತಿಭಟನೆಗಿಳಿದಿದ್ದಾರೆ, ಬೀಡಿ, ಗುಟ್ಕಾ ಕೊಡಬೇಕು ಎಂದು ಆಗ್ರಹಿಸಿ ಜೈಲಿನಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.
ಮುಸ್ತಫಾ ಎಂಬ ಕೈದಿಯ ನೇತೃತ್ವದಲ್ಲಿ ಸುಮಾರು 70ಕ್ಕೂ ಹೆಚ್ಚು ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದು, ಬೀಡಿ, ಸಿಗರೇಟ್, ಗುಟ್ಕಾ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯದಲ್ಲಿರುವ ವಿವಿಧ ಜೈಲುಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗಿದ್ದು, ಯಾವುದೇ ವಸ್ತುಗಳನ್ನು ಜೈಲಿಗೆ ಸಾಗಿಸುವಂತಿಲ್ಲ. ಈ ನಡುವೆಯೇ ಕಲಬುರಗಿ ಜೈಲಿನಲ್ಲಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ.
ಇನ್ನೊಂದೆಡೆ ಕಲಬುರಗಿ ಜೈಲಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜೈಲು ಮುಖ್ಯ ಅಧೀಕ್ಷಕಿ ವಿರುದ್ಧ ಲಂಚದ ಆರೋಪ ಕೇಳಿಬಂದಿದೆ. ಹಣ ಕೊಟ್ಟರೆ ಜೈಲಿನಲ್ಲಿ ಎಲ್ಲವೂ ಲಭ್ಯ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಮುಸ್ತಫಾ ಎಂಬ ಕೈದಿ ಗುಣಮಟ್ಟದ ಆಹಾರ ಕೇಳಿದ್ದಕ್ಕೆ ಆತನನ್ನು ಥಳಿಸಲಾಗಿದೆ ಅಲ್ಲದೇ 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಅನಾಮಧೇಯ ಮಹಿಳೆಯಿಂದ ದೂರು ನೀಡಿ ಜೈಲು ಅಧೀಕ್ಷಕಿಗೆ ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂಬ ಆರೋಪವೂ ಇದೆ. ಕೈದಿಗಳ ಬ್ಲ್ಯಾಕ್ ಮೇಲ್ ಕುರಿತು ಜೈಲು ಅಧೀಕ್ಷಕಿ ಅನಿತಾ ಸೈಬರ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.