ಕಲಬುರಗಿ: ಕಲಬುರಗಿ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬ ತಾನು ಹನಿಟ್ರ್ಯಾಪ್ ಮಾಡಿ ಹಣ ತೆಗೆದುಕೊಂಡಿದ್ದು ನಿಜ ಎಂದು ತಪ್ಪೊಪ್ಪಿಕೊಂಡು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಕಲಬುರಗಿಯಲ್ಲಿ ಅಮಾಯಕ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಉದ್ಯಮಿಗಳು, ಅಧಿಕಾರಿಗಳು, ಪೊಲೀಸರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ, ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಇದೀಗ ಈ ಪ್ರಕರಣದ ಆರೋಪಿಯೊಬ್ಬ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾನೆ.
ಆರೋಪಿ ಪ್ರಭು ಹಿರೇಮಠ, ತಾನು ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ಮಾಡಿ ಹಣ ಪಡೆದಿರುವುದು ನಿಜ ಎಂದಿದ್ದಾನೆ. ಉದ್ಯಮಿ ವಿನೋದ್ ಗೆ ಹನಿಟ್ರ್ಯಪ ಮಾಡಿ ಹಣ ವಸೂಲಿ ಮಾಡಿದ್ದೆ. ಅವರು 6 ಲಕ್ಷ ರೂಪಾಯಿ ನನ್ನ ಅಕೌಂಟ್ ಗೆ ಆರ್ ಟಿಜಿಎಸ್ ಮಡಿದ್ದಾರೆ. ಅದಾದ ಬಳಿಕ ನಮ್ಮ ಮಾವನ ಅಕೌಂಟ್ ಗೆ 8 ಲಕ್ಷ ಹಣ ಹಾಕಲಾಗಿದೆ.
ನನ್ನ ಅಕೌಂಟ್ ಗೆ ಹಣ ಹಾಕಿ ರಾಜು ಲೆಂಗಟಿ ಹಣ ಡ್ರಾ ಮಾಡಿಸಿಕೊಂಡಿದ್ದಾನೆ. ಆ ಹಣ ಸರ್ ಗೆ ಕೊಡಬೇಕು ಎಂದು ಹೇಳಿ ಹಣ ತೆಗೆದುಕೊಂಡು ಹೋಗಿದ್ದಾನೆ ಎಂದು ಹೇಳಿದ್ದಾನೆ.
ಸದ್ಯ ಪ್ರಕರಣ ಸಂಬಂಧ ಕಲಬುರಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮಾಯಕ ಯುವತಿಯರಿಗೆ ಕೆಲಸ ಆಮಿಷವೊಡ್ಡಿ, ಕಿರಾತಕರ ಗ್ಯಾಂಗ್ ಯುವತಿಯರನ್ನು ಬಲವಂತದಿಂದ ಹನಿಟ್ರ್ಯಾಪ್ ಗೆ ಬಳಸಿಕೊಂಡು ಹಲವರಿಂದ ಹಣ ವಸೂಲಿ ಮಾಡುತ್ತಿದ್ದರು.