ಕಲಬುರಗಿ: ಕಲಬುರಗಿಯಲ್ಲಿ ನಡೆದಿದ್ದ ಹನಿಟ್ರ್ಯಾಪ್ ಪ್ರಕರಣ ಇತ್ತೀಚೆಗೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದೀಗ ಅಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿಯೂ ಮೊದಲ ಪ್ರಕರಣದ ಆರೋಪಿಗಳೇ ಪ್ರಮುಖ ಆರೋಪಿಗಳಾಗಿದ್ದಾರೆ.
ಈ ಹಿಂದೆ ನಡೆದಿದ್ದ ಕಲಬುರಗಿ ಹನಿಟ್ರ್ಯಾಪ್ ಪ್ರಕರಣದ ಆರೋಪಿಗಳಾಗಿರುವ ಪ್ರಭು ಹಿರೇಮಠ, ರಾಜು ಲೇಂಗಟಿ ಈ ಪ್ರಕರಣದಲ್ಲಿಯೂ ಪ್ರಮುಖ ಆರೋಪಿಗಳಾಗಿದ್ದು, ಪ್ರಕರಣ ದಾಖಲಾಗಿದೆ.
ವ್ಯಾಪಾರಿ ವಿನೋದ್ ಕುಮಾರ್ ಖೇಣಿ ಎಂಬುವವರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ, ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪಿಗಳು 34 ಲಕ್ಷ ರೂಪಾಯಿ ದೋಚಿದ್ದರು.
ಈ ಪ್ರಕರಣ ಸಂಬಂಧ ರಾಜು ಲೇಂಗಟಿ, ಪ್ರಭು ಹಿರೇಮಠ ಸೇರಿದಂತೆ 7 ಜನರ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿನೋದ್ ಕುಮಾರ್ ವ್ಯಾಪಾರಿಯಾಗಿದ್ದು, ಆರೋಪಿ ಪ್ರಭು ಹಿರೇಮಠ ಖಾಯಂ ಆಗಿ ಅವರ ಅಂಗಡಿಗೆ ಬರುತ್ತಿದ್ದ. ಗ್ರಾಹಕನಾಗಿದ್ದರಿಂದ ವಿನೋದ್ ಪರಿಚಯ, ಗೆಳತನವಿತ್ತು. ಕಳೆದ ಮೇ ನಲ್ಲಿ ಮಹಾರಾಷ್ಟ್ರ ಮೂಲದ ಪೂಜಾ ಎಂಬ ಯುವತಿ ವಿನೋದ್ ಕುಮಾರ್ ಅವರಿಗೆ ಮೆಸೇಜ್ ಮಾಡಿದ್ದಳಂತೆ. ಆದರೆ ಅವರು ರಿಪ್ಲೇ ಮಾಡಿರಲ್ಲ. ಒಂದು ದಿನ ಮಧ್ಯರಾತ್ರಿ ಪೂಜಾ ವಾಟ್ಸಾಪ್ ಕಾಲ್ ಮಾಡಿದ್ದಾಳೆ. ಕಾಲ್ ರಿಸೀವ್ ಮಾಡಿ ವಿನೋದ್ ಕುಮಾರ್ ಮಾತನಾಡಿದ್ದರಂತೆ. ಹೀಗೆ ಇಬ್ಬರ ಪರಿಚಯ, ಆಗಾಗ ಸಹಜವಾಗಿ ಮಾತುಕತೆ ನಡೆದಿತ್ತು ಎನ್ನಲಾಗಿದೆ.
ಒಮ್ಮೆ ವ್ಯಾಪರ ನಿಮಿತ್ತ ವಿನೋದ್ ಕುಮಾರ್ ಹೈದರಾಬಾದ್ ಗೆ ಹೋಗುವಾಗ ಪೂಜಾಗೆ ತಿಳಿಸಿದ್ದರಂತೆ. ಆಕೆ ಕೂಡ ಹೈದರಾಬಾದ್ ಗೆ ತೆರಳಿದ್ದಾಳೆ. ತಾನು ಕೆಲಸದ ವಿಚಾರಕ್ಕೆ ಹೈದರಾಬಾದ್ ಗೆ ಬಂದಿದ್ದು, ರಾಣಿಗುಂಜ್ ಪ್ರದೇಶದಲ್ಲಿದ್ದೇನೆ. ಭೇಟಿಯಾಗುತ್ತೇನೆ ಎಂದಿದ್ದಳು. ಆಕೆಯನ್ನು ಭೇಟಿಯಾದ ವೇಳೆ ನನ್ನ ಫೋನ್ ನಂಬರ್ ನಿನಗೆ ಹೇಗೆ ಸಿಕ್ಕಿದೆ ಎಂದು ವಿಚಾರಿಸಿದ್ದಾರೆ. ಈ ವೇಳೆ ಪೂಜಾ, ಪ್ರಭು ಹಿರೇಮಠ ಕೊಟ್ಟಿದ್ದಾನೆ ಎಂದಿದ್ದಳು. ಅಲ್ಲಿಂದ ಪೂಜಾ ಹಾಗೂ ಪ್ರಭು ಹಿರೇಮಠ ಗ್ಯಾಂಗ್ ನಿಂದ ಹನಿಟ್ರ್ಯಾಪ್ ಆರಂಭವಾಗಿದ್ದು, ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ 34 ಲಕ್ಷ ರೂಪಾಯಿ ದೋಚಿದ್ದರು.
ಇದೀಗ ವಿನೋದ್ ಕುಮಾರ್ ಖೇಣಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.