ಕಲಬುರ್ಗಿ: ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ನಾವದಗಿ ಗ್ರಾಮದ ಹೊರವಲಯದ ತೊಗರಿ ಹೊಲದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಕಂಡು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸತ್ಯಸಾಯಿ ವಿವಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಸಿದ್ದಪ್ಪ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ.
ಬೆಳಕೋಟ ಗ್ರಾಮದ ನಿವಾಸಿಯಾಗಿರುವ ಸಿದ್ದಪ್ಪ ದುಬೈಗೆ ಕೆಲಸಕ್ಕೆ ಹೋಗಿದ್ದ. ಕೊರೋನಾ ಸಂದರ್ಭದಲ್ಲಿ ಊರಿಗೆ ಮರಳಿದ ಆತ ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದ. ಕೂಲಿ ಕೆಲಸ ಮಾಡಿಕೊಂಡಿದ್ದು, ನಂತರ ನವನಿಹಾಳ್ ಸಮೀಪದ ಪುಟ್ಟಪರ್ತಿಯ ಸತ್ಯಸಾಯಿ ವಿವಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ದಿನವೂ ಊರಿನಿಂದ ಓಡಾಡುತ್ತಿದ್ದ. ತಡವಾಗಿ ಬರುವುದಾಗಿ ಹೇಳಿದ್ದ ಆತ ರಾತ್ರಿಯಾದರೂ ಮನೆಗೆ ಮರಳದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ನಾವದಗಿ ಗ್ರಾಮದ ಬಳಿ ಸಿದ್ದಪ್ಪನ ಟಿವಿಎಸ್ ಕಂಡುಬಂದಿದೆ. ಸುತ್ತಲೂ ಹುಡುಕಾಡಿದಾಗ ತೊಗರಿ ಹೊಲದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿವಸ್ತ್ರವಾಗಿ ಬಿದ್ದಿರುವುದು ಕಂಡುಬಂದಿದೆ. ಮಾಹಿತಿ ತಿಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.