ಬೈಕ್ – ಸ್ಕೂಟಿ ಓಡಿಸುವಾಗ ಹೆಲ್ಮೆಟ್ ಕಡ್ಡಾಯ. ಇದು ಒಂದು ರಕ್ಷಾಕವಚ. ರಸ್ತೆ ಅಪಘಾತಗಳಲ್ಲಿ ಪ್ರಾಣ ಉಳಿಸುವ ಕೆಲಸವನ್ನು ಹೆಲ್ಮೆಟ್ ಅನೇಕ ಬಾರಿ ಮಾಡುತ್ತದೆ. ರಸ್ತೆ ಅಪಘಾತಗಳಲ್ಲಿ ಮಾತ್ರವಲ್ಲ ಸರ್ಕಾರಿ ನೌಕರರ ಪ್ರಾಣ ಉಳಿಸುವ ಕೆಲಸವನ್ನೂ ಹೆಲ್ಮೆಟ್ ಮಾಡ್ತಿದೆ.
ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅಲ್ಲಿ ಕೆಲಸ ಮಾಡುವವರು ಹೆಲ್ಮೆಟ್ ಹಾಕೋದನ್ನು ನೀವು ನೋಡಿರಬಹುದು. ಆದ್ರೆ ಕಚೇರಿಯಲ್ಲಿ ಕೆಲಸ ಮಾಡುವವರು ಹೆಲ್ಮೆಟ್ ಹಾಕೋದನ್ನು ನೋಡಿದ್ದೀರಾ?
ಇಲ್ಲ ಅಂದ್ರೆ ಬಿಹಾರದ ಕೈಮೂರ್ ಜಿಲ್ಲೆಯ ಮುಖ್ಯ ಅಂಚೆ ಕಚೇರಿಯಲ್ಲಿ ನೋಡ್ಬಹುದು. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಹೆಲ್ಮೆಟ್ ಧರಿಸ್ತಾರೆ. ಬೈಕ್, ಸ್ಕೂಟಿ ಇಲ್ಲದೆ ನಡೆದು ಕಚೇರಿಗೆ ಬರುವ ಉದ್ಯೋಗಿ ಕೂಡ ಇಲ್ಲಿಗೆ ಹೆಲ್ಮೆಟ್ ತರ್ತಾನೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಕಟ್ಟಡ.
ಕೈಮೂರ್ ಜಿಲ್ಲೆಯಲ್ಲಿರುವ ಅಂಚೆ ಕಚೇರಿ ಕಟ್ಟಡ ತುಂಬಾ ಹಳೆಯದು. ಅದು ಯಾವಾಗ ಬೇಕಾದ್ರೂ ಕೆಳಗೆ ಬೀಳಬಹುದು. ಪ್ಲಾಸ್ಟರ್ ಆಗಾಗ ಉದ್ಯೋಗಿಗಳ ತಲೆ ಮೇಲೆ ಬೀಳ್ತಿರುತ್ತದೆ. ಪ್ರಾಣ ರಕ್ಷಣೆಗಾಗಿ ಉದ್ಯೋಗಿಗಳು ಕೆಲಸದ ಸಮಯದಲ್ಲಿ ಹೆಲ್ಮೆಟ್ ಧರಿಸ್ತಾರೆ. ಮೇಲಿನ ಅಧಿಕಾರಿಗಳಿಗೆ ಕಟ್ಟಡದ ದುಸ್ಥಿತಿ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದ್ರೆ ಯಾವುದೇ ಪ್ರಯೋಜನ ಆಗಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಈ ಕಚೇರಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜನರು ಕಟ್ಟಡದ ಸ್ಥಿತಿ ಹಾಗೂ ಅಲ್ಲಿನ ಉದ್ಯೋಗಿಗಳ ದುಸ್ಥಿತಿ ನೋಡಿ ದಂಗಾಗಿದ್ದಾರೆ. ಎಲ್ಲಿ ಸಿಕ್ಕಿದ್ರೂ ಈ ಅಂಚೆ ಕಚೇರಿಯಲ್ಲಿ ಕೆಲಸ ಬೇಡ ಎನ್ನುತ್ತಿದ್ದಾರೆ.